ಉದಯವಾಹಿನಿ, ಈ ಬಾರಿಯ ಸಂಕ್ರಾಂತಿ ಹಬ್ಬದ ಅಖಾಡದಲ್ಲಿ ಟಾಲಿವುಡ್‌ನ ಘಟಾನುಘಟಿಗಳ ನಡುವೆ ದೊಡ್ಡ ಪೈಪೋಟಿಯೇ ಏರ್ಪಟ್ಟಿತ್ತು. ಪ್ರಭಾಸ್ ಸೇರಿದಂತೆ ಐದು ಪ್ರಮುಖ ಸಿನಿಮಾಗಳು ತೆರೆಗೆ ಬಂದಿದ್ದರೂ, ಅಂತಿಮವಾಗಿ ಬಾಕ್ಸ್ ಆಫೀಸ್ ಗೆದ್ದಿರುವುದು ಮಾತ್ರ ಮೆಗಾಸ್ಟಾರ್ ಚಿರಂಜೀವಿ!
ಚಿರಂಜೀವಿ ನಟನೆಯ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಪ್ರಸ್ತುತ ತೆಲುಗು ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಜನವರಿ 12 ರಂದು ಅದ್ಧೂರಿಯಾಗಿ ಬಿಡುಗಡೆಯಾದ ಈ ಚಿತ್ರ ಮೊದಲ ದಿನವೇ 84 ಕೋಟಿ ರೂಪಾಯಿ ಗಳಿಸಿ ಶುಭಾರಂಭ ಮಾಡಿತ್ತು. ಆದರೆ ಅಚ್ಚರಿಯ ಸಂಗತಿಯೆಂದರೆ, ಈ ಸಿನಿಮಾ ಎಸ್.ಎಸ್. ರಾಜಮೌಳಿ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ‘RRR’ ನ ದಾಖಲೆಯನ್ನೇ ಅಳಿಸಿ ಹಾಕಿದೆ.
ಸಿನಿಮಾ ಬಿಡುಗಡೆಯಾದ ಐದನೇ ದಿನ ಆಂಧ್ರ ಮತ್ತು ತೆಲಂಗಾಣದಲ್ಲಿ ‘RRR’ ಸಿನಿಮಾ ಸುಮಾರು 13 ಕೋಟಿ ಗಳಿಸಿತ್ತು. ಆದರೆ ಚಿರಂಜೀವಿ ಅವರ ಈ ಹೊಸ ಸಿನಿಮಾ ಐದನೇ ದಿನ ಬರೋಬ್ಬರಿ 14.50 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ರಾಮ್ ಚರಣ್ ಮತ್ತು ಎನ್.ಟಿ.ಆರ್ ಅವರ ಐದನೇ ದಿನದ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕಿದೆ. ವಾರ ಕಳೆಯುತ್ತಾ ಬಂದರೂ ಸಿನಿಮಾ ಇನ್ನೂ ಡಬಲ್ ಡಿಜಿಟ್ ಗಳಿಕೆಯನ್ನು ಮುಂದುವರಿಸಿರುವುದು ವಿತರಕರಲ್ಲಿ ಸಂತಸ ಮೂಡಿಸಿದೆ.
ಕೇವಲ ಐದು ದಿನಗಳಲ್ಲಿ ಈ ಸಿನಿಮಾ ವಿಶ್ವದಾದ್ಯಂತ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ಸಂಗ್ರಹಿಸಿದೆ. 2019 ರಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ನಂತರ ಚಿರಂಜೀವಿ ಅವರಿಗೆ ಸಿಕ್ಕ ಅತಿದೊಡ್ಡ ಗೆಲುವು ಇದಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಮೆಗಾ ಅಭಿಮಾನಿಗಳಿಗೆ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಮೂಲಕ ಬಾಸ್ ಭರ್ಜರಿ ಉಡುಗೊರೆ ನೀಡಿದ್ದಾರೆ.
ಪ್ರಭಾಸ್ ಸಿನಿಮಾ ಸೇರಿದಂತೆ ಇತರ ದೊಡ್ಡ ಬಜೆಟ್ ಚಿತ್ರಗಳ ನಡುವೆಯೂ ಚಿರಂಜೀವಿ ಅವರ ವರ್ಚಸ್ಸು ಬಾಕ್ಸ್ ಆಫೀಸ್‌ನಲ್ಲಿ ಮತ್ತೆ ಸಾಬೀತಾಗಿದೆ.

Leave a Reply

Your email address will not be published. Required fields are marked *

error: Content is protected !!