ಉದಯವಾಹಿನಿ, ಭೋಪಾಲ್(ಮಧ್ಯ ಪ್ರದೇಶ): ಒಬ್ಬ ಪುರುಷ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸುಂದರ ಹುಡುಗಿಯನ್ನು ನೋಡಿದರೆ, ಆತನ ಮನಸ್ಸು ವಿಚಲಿತವಾಗಬಹುದು. ಆ ಸಂದರ್ಭದಲ್ಲಿ ಅತ್ಯಾಚಾರ ನಡೆಯಬಹುದು ಎಂದು ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕ ಫೂಲ್ ಸಿಂಗ್ ಬರಯ್ಯ ಹೇಳಿದ್ದು, ಭಾರೀ ವಿವಾದಕ್ಕೀಡಾಗಿದೆ. ಅಷ್ಟೇ ಅಲ್ಲದೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರ ಮೇಲಿನ ಲೈಂಗಿಕ ದುಷ್ಕೃತ್ಯಗಳನ್ನು “ತೀರ್ಥ ಫಲ” (ತೀರ್ಥಯಾತ್ರೆಯ ಪ್ರತಿಫಲಗಳು) ಎಂದು ಬಣ್ಣಿಸಿದ್ದಾರೆ. ದೇಶದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಮಹಿಳೆಯರ ಮೇಲೆ ಅತಿ ಹೆಚ್ಚು ಅತ್ಯಾಚಾರಗಳು ನಡೆಯುತ್ತಿವೆ ಎಂದೂ ಶಾಸಕ ಬರಯ್ಯ ಹೇಳಿದ್ದಾರೆ.
ಮಧ್ಯ ಪ್ರದೇಶದ ದತಿಯಾ ಜಿಲ್ಲೆಯ ಭಂದೇರ್‌ ಕ್ಷೇತ್ರದ ಕಾಂಗ್ರೆಸ್ ಶಾಸಕ ಬರಯ್ಯ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕರು ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ. ಮತ್ತೊಂದೆಡೆ, ಈ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಬಿಹಾರದ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಹರಿಮೋಹನ್ ಝಾ ಎಂಬವರನ್ನು ತಾವು ಉಲ್ಲೇಖಿಸಿರುವುದಾಗಿ ಬರಯ್ಯ ಸ್ಪಷ್ಟನೆ ನೀಡಿದ್ದಾರೆ. ನಾನು ಅವರ ಹೇಳಿಕೆಯನ್ನು ಒಂದು ನಿರ್ದಿಷ್ಟ ಸಂದರ್ಭದಲ್ಲಿ ಉಲ್ಲೇಖಿಸಿದ್ದೇನೆ. ನಾನೇ ಅದನ್ನು ಒಪ್ಪಲ್ಲ. ಆದರೆ ಅದರ ಉಲ್ಲೇಖವನ್ನು ತೆಗೆದುಕೊಂಡು ಹಾಗೆ ಹೇಳಿದೆ ಎಂದು ಹೊಸ ರಾಗ ಎಳೆದಿದ್ದಾರೆ. ಶಾಸಕನ ಪಕ್ಷದಿಂದ ಹೊರ ಹಾಕುವಂತೆ ಬಿಜೆಪಿ ಆಗ್ರಹ: ಈ ಹೇಳಿಕೆಯನ್ನು ಖಂಡಿಸುತ್ತೇನೆ. ಇಂಥ ಹೇಳಿಕೆ ನೀಡುವ ಮೂಲಕ ಶಾಸಕ ಬರಯ್ಯ ಸಾಮಾಜಿಕ ದ್ವೇಷ ಹರಡುತ್ತಿದ್ದಾರೆ ಎಂದು ಸಿಎಂ ಮೋಹನ್ ಯಾದವ್ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಅವರು ಶಾಸಕ ಬರಯ್ಯರನ್ನು ತಕ್ಷಣವೇ ಪಕ್ಷದಿಂದ ಹೊರಹಾಕಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!