ಉದಯವಾಹಿನಿ, ಲಕ್ನೋ: ದಿ. ಮುಲಾಯಂ ಸಿಂಗ್ ಯಾದವ್ ಅವರ ಪುತ್ರನ ಕುಟುಂಬದಲ್ಲಿ ಬಿರುಕು ಉಂಟಾಗಿದೆ. ಪತ್ನಿ ವಿರುದ್ಧ ಸಿಡಿದಿರುವ ಪ್ರತೀಕ್ ಯಾದವ್ ಅಪರ್ಣಾ ಯಾದವ್‌ಗೆ ವಿವಾಹ ವಿಚ್ಛೇದನ ನೀಡೋಕೆ ನಿರ್ಧಾರ ಮಾಡಿದ್ದಾರೆ. ಉತ್ತರ ಪ್ರದೇಶದ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷೆ ಅಪರ್ಣಾ ಯಾದವ್ ಅವರ ಪತಿ ಪ್ರತೀಕ್ ಯಾದವ್ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ.
ಪ್ರತೀಕ್ ಯಾದವ್ ಪೋಸ್ಟ್‌ನಲ್ಲಿ ಏನಿದೆ?: ʻನಾನು ಈ ಸ್ವಾರ್ಥ ಮಹಿಳೆಗೆ ಆದಷ್ಟು ಬೇಗ ವಿಚ್ಛೇದನ ಕೊಡಲಿದ್ದೇನೆ. ಆಕೆ ತಾನು ಫೇಮಸ್ ಆಗ್ಬೇಕು ಮತ್ತು ಪ್ರಭಾವಶಾಲಿ ಆಗಬೇಕು ಅಂತ ನನ್ನ ಕುಟುಂಬ ಸಂಬಂಧಗಳನ್ನ ಹಾಳು ಮಾಡಿದ್ದಾಳೆ. ಈಗ ನನ್ನ ಮಾನಸಿಕ ಸ್ಥಿತಿ ತುಂಬಾ ಕೆಟ್ಟಿದೆ. ಆದಾಗ್ಯೂ ಅದರ ಬಗ್ಗೆ ಅವಳು ಚಿಂತಿಸಲ್ಲ. ತನ್ನ ಬಗ್ಗೆ ಮಾತ್ರ ಚಿಂತೆ ಮಾಡ್ತಾಳೆ. ಇಷ್ಟೊಂದು ಕೆಟ್ಟ ಆತ್ಮವನ್ನ ನಾನು ಎಂದಿಗೂ ನೋಡಿಲ್ಲ. ಒಬ್ಬ ಸನ್ಯಾಸಿಯನ್ನ ಮದ್ವೆಯಾಗಿದ್ದು ನನ್ನ ದುರದೃಷ್ಟ ಅಂತ ಬರೆದುಕೊಂಡಿದ್ದಾರೆ. ಸದ್ಯ ಈ ಬಗ್ಗೆ ಅಪರ್ಣಾ ಯಾದವ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಪರ್ಣಾ ಯಾದವ್ ಯಾರು?: ಅಪರ್ಣಾ ಯಾದವ್ ಅವರು ಮುಲಾಯಾಂ ಸಿಂಗ್ ಯಾದವ್ ಕಿರಿಯ ಪುತ್ರ ಪ್ರತೀಕ್ ಯಾದವ್ ಅವರ ಪತ್ನಿ. ಪ್ರತೀಕ್, ಅಖಿಲೇಶ್ ಯಾದವ್ ಅವರ ಕಿರಿಯ ಸಹೋದರ ಕೂಡ ಹೌದು. ಅಪರ್ಣಾ ಅವರು 2017ರ ವಿಧಾನಸಭೆ ಚುನಾವಣೆಯಲ್ಲಿ ಲಕ್ನೋದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಆಗ ಬಿಜೆಪಿಯ ಬಹುಗುಣ ಜೋಶಿ ವಿರುದ್ಧ ಸೋತಿದ್ದರು. ಇವರ ಪತಿ ಪ್ರತೀಕ್ ಯಾದವ್ ರಾಜಕೀಯದಿಂದ ದೂರವುಳಿದಿದ್ದಾರೆ. 2022ರಲ್ಲಿ ಎಸ್ಪಿ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಸದ್ಯ ಉತ್ತರ ಪ್ರದೇಶದ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷೆ ಆಗಿದ್ದಾರೆ.
