ಉದಯವಾಹಿನಿ, ತಿರುಪತಿ (ಆಂಧ್ರ ಪ್ರದೇಶ): ಶ್ರೀ ವಾಣಿ ಟ್ರಸ್ಟ್ ನಿಧಿ ಬಳಕೆ ಮಾಡಿಕೊಂಡು ರಾಜ್ಯದಲ್ಲಿ 5 ಸಾವಿರ ದೇಗುಲಗಳ ನಿರ್ಮಾಣಕ್ಕೆ ಟಿಟಿಡಿ ಮುಂದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಸಮುದಾಯದ ಹೆಚ್ಚಿರುವ ಗ್ರಾಮ ಮತ್ತು ನಗರಗಳಲ್ಲಿ ಆದ್ಯತೆ ಮೇರೆಗೆ ಈ ದೇಗುಲಗಳ ನಿರ್ಮಾಣ ಮಾಡಲಾಗುವುದು. ಈ ದೇಗುಲಗಳ ನಿರ್ಮಾಣದಿಂದ ಗ್ರಾಮದಲ್ಲಿನ ಸಾಂಸ್ಕೃತಿಕತೆ ಮತ್ತು ದೈವಿಕತೆಯನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ. ಹಾಗೇ ದೇಗುಲಗಳಲ್ಲಿ ಭಜನೆ ನಡೆಸುವ ಸೌಲಭ್ಯಗಳನ್ನು ಕಲ್ಪಿಸಲು ನಿರ್ಧರಿಸಲಾಗಿದೆ. ಇಲ್ಲಿಯವರೆಗೆ ದೇಗುಲ ನಿರ್ಮಾಣಕ್ಕೆ 1,176 ಅರ್ಜಿಗಳನ್ನು ಬಂದಿದ್ದು, ಆಡಳಿತಾಧಿಕಾರಿಗಳು 463 ದೇಗುಲಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ. ಉಳಿದ ಅರ್ಜಿಗಳ ಪರಿಶೀಲನೆ ಮುಂದುವರೆದಿದೆ.
ಭೂಮಿ ಲಭ್ಯತೆ ಮೇಲೆ ನಿಧಿ ಬಿಡುಗಡೆ: ಗ್ರಾಮ ಮತ್ತು ಕಾಲೋನಿಗಳಲ್ಲಿ ದೇಗುಲ ನಿರ್ಮಾಣಕ್ಕೆ ಲಭ್ಯವಿರುವ ಜಾಗದ ಆಧಾರದ ಮೇಲೆ ನಿಧಿಯನ್ನು ಬಿಡುಗಡೆ ಮಾಡಲಾಗುವುದು. 5 ಸೆಂಟ್ ಜಾಗಕ್ಕೆ 10 ಲಕ್ಷ ರೂ., 8 ಸೆಂಟ್ ಜಾಗಕ್ಕೆ 15 ಲಕ್ಷ ರೂ., 10 ಸೆಂಟ್ ಮತ್ತು ಹೆಚ್ಚಿನ ಜಾಗಕ್ಕೆ 20 ಲಕ್ಷವನ್ನು ನೀಡಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಇತ್ತೀಚಿಗೆ ಸಿಎಂ ಚಂದ್ರಬಾಬು ನಾಯ್ಡು, ಈ ದೇಗುಲಗಳು ಕಾಂಪೌಂಡ್ ಗೋಡೆ ಮತ್ತು ಅಲಂಕಾರ ಹೊಂದಿರಬೇಕು ಹಾಗೆಯೇ ಅಗತ್ಯವಿದ್ದಲ್ಲಿ ಮಾತ್ರ ಹೆಚ್ಚಿನ ನಿಧಿಯನ್ನು ನೀಡಬೇಕು ಎಂದು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 5 ರಿಂದ 10 ಲಕ್ಷ ರೂ.ಗಳನ್ನ ಈ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತದೆ.
ಪ್ರತಿ ದೇಗುಲಗಳ ನಿರ್ಮಾಣಕ್ಕೆ ಕನಿಷ್ಠ 15 ಲಕ್ಷ ರೂ. ಮತ್ತು ಗರಿಷ್ಠ 30 ಲಕ್ಷ ನಿಧಿಯನ್ನು ನಿಗದಿ ಮಾಡಲಾಗಿದೆ. ಈ ಹಿಂದೆ 2000 ದೇಗುಲಗಳ ನಿರ್ಮಾಣಕ್ಕೆ ಪ್ರತಿ ದೇಗುಲಕ್ಕೆ ಗರಿಷ್ಠ 10 ಲಕ್ಷ ರೂಪಾಯಿಗಳನ್ನ ನೀಡಲಾಗಿತ್ತು. ಇದರಲ್ಲಿ 1,400 ದೇಗುಲಗಳು ನಿರ್ಮಾಣ ಪೂರ್ಣಗೊಂಡಿದ್ದು, 600 ದೇಗುಲಗಳು ಇನ್ನೂ ನಿರ್ಮಾಣ ಹಂತದಲ್ಲಿವೆ. ಇದೀಗ ಮತ್ತೆ 5,000 ದೇಗುಲಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳು ದಾನವಾಗಿ ನೀಡಿರುವ ಭೂಮಿಗಳು ದೇವಸ್ಥಾನದ ನಿರ್ಮಾಣಕ್ಕೆ ಬೇಕಿದೆ. ಒಂದು ವೇಳೆ, ಪಂಚಾಯತ್ ಭೂಮಿಯಲ್ಲಿ ನಿರ್ಮಾಣಕ್ಕೆ ಯೋಚಿಸಿದರೆ, ನಿರ್ಣಯದ ಅವಶ್ಯಕತೆ ಇದೆ. ಕಂದಾಯ ಭೂಮಿಯಾಗಿದ್ದರೆ, ಸಂಬಂಧಪಟ್ಟ ಅಧಿಕಾರಿಗಳಿಂದ ಅದಕ್ಕೆ ನಿರಪೇಕ್ಷಣಾ ಪತ್ರ ಪಡೆಯುವುದು ಅಗತ್ಯವಾಗಿದೆ.
