ಉದಯವಾಹಿನಿ, ಭಿವಂಡಿ (ಮಹಾರಾಷ್ಟ್ರ): ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕೊನಾರ್ಕ್ ವಿಕಾಸ್ ಅಘಾಡಿ (ಕೆವಿಎ) ಕಾರ್ಯಕರ್ತರ ನಡುವೆ ಸೋಮವಾರ ನಡೆದ ಪ್ರಮುಖ ರಾಜಕೀಯ ಘರ್ಷಣೆಯ ನಂತರ ಮಹಾರಾಷ್ಟ್ರದ ಭಿವಂಡಿ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಜನಸಮೂಹವೊಂದು ಕಲ್ಲು ತೂರಾಟ ನಡೆಸಿದ್ದರಿಂದ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ. ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಭಿವಂಡಿ ನಿಜಾಮ್‌ಪುರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ನಂತರ ಶಿವಾಜಿ ಚೌಕ್‌ನಲ್ಲಿ ಕೆವಿಎ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಹಿಂಸಾಚಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕಾಂಗ್ರೆಸ್ 30 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ (20), ಶಿವಸೇನೆ (12), ಎನ್‌ಸಿಪಿ (12), ಸಮಾಜವಾದಿ ಪಕ್ಷ (6), ಕೆವಿಎ (4), ಭಿವಂಡಿ ವಿಕಾಸ್ ಅಘಾಡಿ (3) ಮತ್ತು ಸ್ವತಂತ್ರ (1) ಸ್ಥಾನಗಳನ್ನು ಗೆದ್ದಿವೆ.
ಜನರು ಕಲ್ಲು ತೂರಾಟ ನಡೆಸುತ್ತಿರುವುದು ಮತ್ತು ಪೊಲೀಸರು ಗುಂಪನ್ನು ಚದುರಿಸಲು ಮಧ್ಯಪ್ರವೇಶಿಸುತ್ತಿರುವುದು ಘಟನೆಯ ವೇಳೆ ಸೆರೆ ಹಿಡಿದ ವಿಡಿಯೋವೊಂದರಲ್ಲಿ ಸೆರೆಯಾಗಿದೆ. ಘರ್ಷಣೆಯ ನಂತರ ಥಾಣೆ ಪೊಲೀಸರು ಕೆಲ ಜನರನ್ನು ಬಂಧಿಸಿದ್ದಾರೆ.
ಏತನ್ಮಧ್ಯೆ, ಸ್ಥಳೀಯ ಬಿಜೆಪಿ ಶಾಸಕ ಮಹೇಶ್ ಚೌಗುಲೆ ಅವರು, ಪಕ್ಷದ ಕಾರ್ಯಕರ್ತರ ಮೇಲೆ ಪ್ರತಿಸ್ಪರ್ಧಿಗಳು ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಮಾಜಿ ಮೇಯರ್ ಮತ್ತು ಕಾರ್ಪೊರೇಟರ್ ಆಗಿ ಆಯ್ಕೆಯಾಗಿರುವ ಕೆವಿಎ ಮುಖಂಡ ವಿಲಾಸ್ ಪಾಟೀಲ್ ಅವರು ಮಾತನಾಡಿ, ‘ಬಿಜೆಪಿ ಕಾರ್ಯಕರ್ತರು ಹಿಂಸಾಚಾರವನ್ನು ಆರಂಭಿಸಿದರು ಹಾಗೂ ನನ್ನ ಮನೆಯ ಮೇಲೂ ದಾಳಿ ಮಾಡಿದರು’ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಪಾಟೀಲ್ ಅವರ ಬಂಗಲೆಯಲ್ಲಿ ದಾಳಿ ನಡೆದಾಗ ಘರ್ಷಣೆ ಉಂಟಾಯಿತು. ಭಿವಂಡಿ ಪಶ್ಚಿಮದ ಬಿಜೆಪಿ ಶಾಸಕ ಮಹೇಶ್ ಚೌಗುಲೆ ಅವರ ಪುತ್ರ ಮೀತ್ ಚೌಗುಲೆ ಮತ್ತು ಅವರ ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿದ್ದಾರೆ.
