ಉದಯವಾಹಿನಿ, ಧನಬಾದ್, ಜಾರ್ಖಂಡ್: ಧನ್ಬಾದ್ ಜಿಲ್ಲೆಯ ಚಿರ್ಕುಂಡ ಪುರಸಭೆ ವ್ಯಾಪ್ತಿಯ ಸುಂದರ್ ಎಂಬ ನಗರದಲ್ಲಿ ಮಾನವನ ಮಲದಿಂದ ಗೊಬ್ಬರ ಉತ್ಪಾದಿಸುವ ಮಲ ತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಾಣ ಮಾಡಲಾಗಿದೆ. ಸೆಪ್ಟಿಕ್ ಟ್ಯಾಂಕ್‌ಗಳು ಮತ್ತು ಪಿಟ್ ಶೌಚಾಲಯಗಳಿಂದ ಸಂಗ್ರಹಿಸಿದ ಮಲ ಕೆಸರನ್ನು ಸಂಸ್ಕರಿಸಿ ಗೊಬ್ಬರವಾಗಿ ಪರಿವರ್ತಿಸುವ ಘಟಕ ಇದಾಗಿದ್ದು, ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇದರ ನಿರ್ವಹಣೆ ಹಾಗೂ ಈ ಗೊಬ್ಬರದ ಬಗ್ಗೆ ರೈತರಲ್ಲಿ ಅರಿವು ಮೂಡಿಸುವುದು ಸೇರಿದಂತೆ ಇತರ ಜವಾಬ್ದಾರಿಯನ್ನು ಮಹಿಳಾ ಸ್ವಸಹಾಯ ಗುಂಪುಗಳು ವಹಿಸಿಕೊಂಡಿರುವುದು ಗಮನಾರ್ಹ.
ಇದು ಸಂಪೂರ್ಣವಾಗಿ ಸಾವಯವ. ಇದರ ಉತ್ಪಾದನೆಯಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ. ರಾಸಾಯನಿಕ ಗೊಬ್ಬರಗಳು ಮಣ್ಣಿನ ಫಲವತ್ತತೆ ಕಡಿಮೆ ಮಾಡಿದರೆ, ಮಾನವನ ಮಲದಿಂದ ತಯಾರಿಸಿದ ಈ ಗೊಬ್ಬರವು ಮಣ್ಣಿನ ಫಲವತ್ತತೆ ಸುಧಾರಿಸುತ್ತದೆ. ಚಿರ್ಕುಂಡ ಪುರಸಭೆಯು ಸುಂದರ್ ನಗರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಈ ಘಟಕವನ್ನು ನಿರ್ಮಾಣ ಮಾಡಿದ್ದು, ಘಟಕದ ಸಂಸ್ಕರಣೆಯನ್ನು JUDCO ಎಂಬ ಕಂಪನಿಯು ನೋಡಿಕೊಳ್ಳುತ್ತಿದೆ. ಈ ಘಟಕವು ತ್ಯಾಜ್ಯ ನೀರನ್ನು ಕೃಷಿ/ತೋಟಗಾರಿಕೆಗೆ, ಘನ ಪದಾರ್ಥವನ್ನು ಗೊಬ್ಬರ ಆಗಿ ಪರಿವರ್ತಿಸಿ ಮಣ್ಣಿನ ಮಾಲಿನ್ಯ ತಡೆಗಟ್ಟುವುದಲ್ಲದೇ ಸಾರ್ವಜನಿಕ ಆರೋಗ್ಯ ಕೂಡ ರಕ್ಷಿಸುತ್ತದೆ ಎನ್ನುತ್ತಾರೆ ಸ್ಥಳೀಯ ಅಧಿಕಾರಿಗಳು.
ಈ ಘಟನೆ ಹೇಗೆ ಕೆಲಸ ಮಾಡುತ್ತದೆ?: ನಗರದ ಎಲ್ಲಾ ಮನೆಗಳ ಶೌಚಾಲಯಗಳ ಸೆಪ್ಟಿಕ್ ಟ್ಯಾಂಕ್‌ಗಳಿಂದ ತ್ಯಾಜ್ಯ(ಮಲ)ವನ್ನು ಸಂಗ್ರಹಿಸಿ ಟ್ರ್ಯಾಕ್ಟರ್ ಮೂಲಕ ಘಟಕಕ್ಕೆ ತರಲಾಗುತ್ತದೆ. ಇದು 12 MLD (ದಿನಕ್ಕೆ ಮಿಲಿಯನ್ ಲೀಟರ್) ಸಾಮರ್ಥ್ಯದ ಘಟಕ ಇವಾಗಿದ್ದು, ಒಟ್ಟು 12 ಚೇಂಬರ್ಗಳನ್ನು ನಿರ್ಮಿಸಲಾಗಿದೆ. ಅವುಗಳ ಪೈಕಿ ಈಗಾಗಲೇ 6 ಚೇಂಬರ್ಗಳಲ್ಲಿ ಗೊಬ್ಬರವನ್ನು ಉತ್ಪಾದಿಸಲಾಗುತ್ತಿದೆ. ಸದ್ಯದಲ್ಲೇ ಮಾರುಕಟ್ಟೆಗೂ ಪೂರೈಸಲಾಗುತ್ತದೆ. ಪ್ರತಿ ಚೇಂಬರ್ 50 ಟ್ರಕ್ ಲೋಡ್ ತ್ಯಾಜ್ಯ ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ. ಒಂದು ಚೇಂಬರ್ನಲ್ಲಿ ಮಲದಿಂದ ಗೊಬ್ಬರವನ್ನು ಉತ್ಪಾದಿಸಲು ಸುಮಾರು ಆರು ತಿಂಗಳುಗಳು ಬೇಕಾಗುತ್ತದೆ. ತ್ಯಾಜ್ಯದಲ್ಲಿರುವ ನೀರಿಗಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಸಹ ರಚಿಸಲಾಗಿದೆ. ಈ ನೀರನ್ನು ಕೆಳಗಿನಿಂದ ಎಳೆದು, ಫಿಲ್ಟರ್ ಮಾಡಿ, ಒಂದೇ ಸ್ಥಳದಲ್ಲಿ ಸಂಗ್ರಹಿಸಲಾಗುತ್ತದೆ.
