ಉದಯವಾಹಿನಿ, ಬ್ಯಾಂಕಾಕ್: ‘ಒಂದು ಮಗು ನೀತಿ’ಯನ್ನು ಕೈಬಿಟ್ಟು ಒಂದು ದಶಕ ಕಳೆದರೂ, ಚೀನಾದ ಜನಸಂಖ್ಯೆ ಮತ್ತು ಫಲವತ್ತತೆ ದರ ಏರುವ ಬದಲಿಗೆ ನಿರೀಕ್ಷೆಗಿಂತ ಕಡಿಮೆ ಪ್ರಮಾಣಕ್ಕೆ ಕುಸಿದಿದೆ. ಹೀಗಾಗಿ, ಅಲ್ಲಿನ ಸರ್ಕಾರ ಕಾಂಡೋಮ್​ಗಳ ಮೇಲೆ ದುಬಾರಿ ತೆರಿಗೆ, ಮಕ್ಕಳ ಜನನಕ್ಕೆ ಪ್ರೋತ್ಸಾಹಧನ ಘೋಷಿಸಿದೆ.
ಸೋಮವಾರ ಬಿಡುಗಡೆಯಾದ ಜನಸಂಖ್ಯಾ ಅಂಕಿ – ಅಂಶಗಳು ವಿಶ್ವದಲ್ಲಿಯೇ ಎರಡನೇ ಅತಿಹೆಚ್ಚು ಜನಸಂಖ್ಯೆಯುಳ್ಳ ಚೀನಾದ ಫಲವತ್ತತೆ ದರ ತೀವ್ರ ಕುಸಿತ ಕಂಡಿದ್ದನ್ನು ತೋರಿಸಿದೆ. ಸತತ ನಾಲ್ಕನೇ ವರ್ಷವೂ ಜನಸಂಖ್ಯೆ ಇಳಿಕೆಯಾಗಿದೆ. 2024ರಲ್ಲಿ 1.404 ಬಿಲಿಯನ್ ಜನಸಂಖ್ಯಾ ದರ ದಾಖಲಾಗಿತ್ತು. 2025ರಲ್ಲಿ 3 ಮಿಲಿಯನ್​​​​​​ನಷ್ಟು​ ಕುಸಿದು 1.4 ಬಿಲಿಯನ್​ ಜನಸಂಖ್ಯೆ ದರ ದಾಖಲಾಗಿದೆ.
ಶಿಶು ಜನನದಲ್ಲಿ ಸತತ 8 ವರ್ಷ ಇಳಿಕೆ: ಈ ಅಂಕಿ – ಅಂಶಗಳು ದೇಶವು ತೀವ್ರ ಜನಸಂಖ್ಯಾ ಒತ್ತಡವನ್ನು ಎದುರಿಸುತ್ತಿದೆ ಎಂದು ತಿಳಿಸುತ್ತದೆ. 2025ರಲ್ಲಿ ಜನಿಸಿದ ನವಜಾತ ಶಿಶುಗಳ ಸಂಖ್ಯೆ ಕೇವಲ 7.92 ಮಿಲಿಯನ್. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ 1.62 ಮಿಲಿಯನ್ ಅಥವಾ ಶೇಕಡಾ 17 ರಷ್ಟು ಕಡಿಮೆ. ಇಷ್ಟೇ ಅಲ್ಲದೆ, 2015 ರಿಂದ 2023ರ ಸತತ 8 ವರ್ಷಗಳಲ್ಲಿ ಜನನ ಪ್ರಮಾಣದರ ಏರಿಕೆ ಕಂಡಿಲ್ಲ.
ಹೆಚ್ಚಿದ ಆರ್ಥಿಕ ಹೊರೆ, ಮಕ್ಕಳನ್ನು ಹೆರಲು ಹಿಂದೇಟು: ದೇಶದಲ್ಲಿನ ಹೆಚ್ಚಿನ ಕುಟುಂಬಗಳು ಆರ್ಥಿಕ ಹೊರೆಯಿಂದಾಗಿ ಮಕ್ಕಳನ್ನು ಪಡೆಯಲು ಹಿಂದೇಟು ಹಾಕುತ್ತಿವೆ. ಸ್ಪರ್ಧಾತ್ಮಕ ಯುಗದಲ್ಲಿ ಈಗಿನ ಆರ್ಥಿಕ ಬಿಕ್ಕಟ್ಟು ಎದುರಿಸಲು ಸಾಧ್ಯವಾಗದೆ, ಜೀವನ ವೆಚ್ಚ ಪೂರೈಸಲು ಹೆಣಗಾಡುತ್ತಿರುವಾಗ ಹೆಚ್ಚಿನ ಮಕ್ಕಳು ಏಕೆ ಎಂಬ ಮನಸ್ಥಿತಿಗೆ ಜನರು ಬಂದಿದ್ದಾರೆ. ಇದು, ಜನಸಂಖ್ಯಾ ದರದ ಮೇಲೆ ಪರಿಣಾಮ ಬೀಳಲು ಕಾರಣ.
ಫಲವತ್ತತೆ ದರದಲ್ಲಿ ಏರಿಕೆ ಇಲ್ಲ: ಏಷ್ಯಾದ ಇತರ ದೇಶಗಳಂತೆ, ಚೀನಾದಲ್ಲಿ ಫಲವತ್ತತೆ ದರ ಇಳಿಯಲು ಅಲ್ಲಿನ ಮಹಿಳೆಯು ತಮ್ಮ ಜೀವಿತಾವಧಿಯಲ್ಲಿ ಹೊಂದುವ ಸರಾಸರಿ ಶಿಶುಗಳ ಸಂಖ್ಯೆಯೇ ಕಾರಣ. ಸರ್ಕಾರ ನಿರ್ದಿಷ್ಟ ಫಲವತ್ತತೆ ದರವನ್ನು ಪ್ರಕಟಿಸದಿದ್ದರೂ, 2020 ರಲ್ಲಿ ಅದು 1.3 ಇತ್ತು. ತಜ್ಞರ ಪ್ರಕಾರ ಅದು ಸುಮಾರು 1 ರಷ್ಟಿತ್ತು. ಎರಡೂ ಅಂಕಿ – ಅಂಶಗಳನ್ನು ತುಲನೆ ಮಾಡಿದರೆ, ಚೀನಾದ ಜನಸಂಖ್ಯೆಯ ಗಾತ್ರ ಕಾಯ್ದುಕೊಳ್ಳುವ 2.1 ದರಕ್ಕಿಂತ ತೀರಾ ಕಡಿಮೆ ಇದೆ.
ಇನ್ನೊಂದು ಪ್ರಕಾರದಲ್ಲಿ ಹೇಳುವುದಾದರೆ, 2025 ರಲ್ಲಿ ಜನನ ಪ್ರಮಾಣವು ದಾಖಲೆ ಪ್ರಮಾಣದಲ್ಲಿ ಕುಗ್ಗಿದೆ. 1 ಸಾವಿರ ಮಹಿಳೆಯರು ಜನ್ಮ ನೀಡುತ್ತಿರುವ ಮಕ್ಕಳ ಪ್ರಮಾಣ ಶೇಕಡಾ 5.63 ರಷ್ಟು ಮಾತ್ರ. ಅಂದರೆ, 5 ರಿಂದ 6 ಮಕ್ಕಳು ಮಾತ್ರ ಜನಿಸುತ್ತಿವೆ ಎಂದರ್ಥ. ದಶಕಗಳಿಂದ ಇದ್ದ ಒಂದು ಮಗು ನೀತಿಯನ್ನು ಅಲ್ಲಿನ ಕಮ್ಯುನಿಷ್ಟ್​ ಸರ್ಕಾರ 2015 ರಲ್ಲಿ ಸಡಿಸಿಲಿ, 2 ಮಕ್ಕಳನ್ನು ಹೊಂದಲು ಅವಕಾಶ ನೀಡಿತು. ಆದಾಗ್ಯೂ, ಜನಸಂಖ್ಯಾ ದರ ಏರಿಕೆ ಕಾಣದ ಹಿನ್ನೆಲೆ 2021 ರಲ್ಲಿ ಈ ಮಿತಿಯನ್ನು ಮೂರು ಮಕ್ಕಳಿಗೆ ಪರಿಷ್ಕರಿಸಿತು.

Leave a Reply

Your email address will not be published. Required fields are marked *

error: Content is protected !!