ಉದಯವಾಹಿನಿ, ಕಠ್ಮಂಡು (ನೇಪಾಳ): ನೇಪಾಳದಲ್ಲಿ ಚುನಾವಣಾ ಪ್ರಚಾರದ ಕಾವು ಜೋರಾಗಿದ್ದು, ಮಾರ್ಚ್ 5ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮೂರು ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಪ್ರಧಾನಿ ಅಭ್ಯರ್ಥಿಗಳನ್ನು ಘೋಷಿಸಿದೆ. Gen-Z ಪ್ರತಿಭಟನೆ ಬಳಿಕ ಎದುರಾಗುತ್ತಿರುವ ಈ ಚುನಾವಣೆಯಲ್ಲಿ ಎನ್ಸಿ ಮತ್ತು ಆರ್ಎಸ್ಪಿಯಿಂದ ಯುವ ಸ್ಪರ್ಧಿಗಳನ್ನು ಕಣಕ್ಕೆ ಇಳಿಸಿದೆ. ನಾಲ್ಕು ಬಾರಿ ಪ್ರಧಾನಿಯಾಗಿರುವ ಓಲಿ ಕೂಡ ಮತ್ತೆ ಈ ಬಾರಿ ಕಣದಲ್ಲಿದ್ದು, ಇದು ಯುವ ಮತ್ತು ಹಳೆ ತಲೆಮಾರಿನ ನಡುವಿನ ಸ್ಪರ್ಧೆಯಾಗಿ ರೂಪುಗೊಂಡಿದೆ.
ಓಲಿ ವಿರುದ್ಧ ಬಾಲೆನ್ ಸ್ಪರ್ಧೆ: ಈ ಸಾರ್ವತ್ರಿಕ ಚುನಾವಣೆಯಲ್ಲಿ 74 ವರ್ಷದ ಓಲಿ ಮತ್ತು 34 ವರ್ಷದ ಬಾಲೆನ್ ಪ್ರತಿಸ್ಪರ್ಧಿಯಾಗಿ ಝಾಪಾ-5 ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದಾರೆ. 2008ರ ಅವಧಿ ಹೊರತುಪಡಿಸಿದರೆ, ಕಳೆದ ಮೂರು ದಶಕಗಳಲ್ಲಿ ಓಲಿ, ಝಾಪಾ ಜಿಲ್ಲೆಯಿಂದ ಗೆಲುವಿನ ಓಟ ನಡೆಸಿದ್ದು, ಆರು ಸಲ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.ಆದರೆ, ಈ ಬಾರಿ ಓಲಿ ಸರ್ಕಾರದ ವಿರುದ್ಧ ರೂಪುಗೊಂಡ Gen-Z ಪ್ರತಿಭಟನೆ ಬಳಿಕ ಮೊದಲ ಬಾರಿಗೆ ಓಲಿ ವಿರುದ್ಧ ಯುವ ನಾಯಕ ಕಣಕ್ಕೆ ಇಳಿಯುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಚರ್ಚೆಗೂ ಗ್ರಾಸವಾಗಿದೆ.
ಐದನೇ ಬಾರಿ ಅದೃಷ್ಟ ಪರೀಕ್ಷೆಗೆ ಓಲಿ: ನೇಪಾಳದ ಅತಿದೊಡ್ಡ ಪಕ್ಷವಾಗಿರುವ ನೇಪಾಳ ಕಮ್ಯುನಿಸ್ಟ್ ಪಕ್ಷ (ಯುನೈಟೆಡ್ ಮಾರ್ಕ್ಸ್ವಾದಿ-ಲೆನಿನಿಸ್ಟ್) ಪದಚ್ಯುತ ಪ್ರಧಾನಿ ಕೆ ಪಿ ಶರ್ಮಾ ಓಲಿ (74) ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಿದೆ.
ಎನ್ಸಿ ಅಭ್ಯರ್ಥಿಯಾಗಿ ಗಗನ್ ಥಾಪಾ: ನೇಪಾಳಿ ಕಾಂಗ್ರೆಸ್ 49 ವರ್ಷದ ಗಗನ್ ಥಾಪಾ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದೆ. ಕಳೆದ ವಾರ ನಡೆದ ನೇಪಾಳಿ ಕಾಂಗ್ರೆಸ್ ಚುನಾವಣೆಯಲ್ಲಿ ಪಕ್ಷದ ಅಧ್ಯಕ್ಷರಾಗಿ ಗಗನ್ ಥಾಪಾ ಆಯ್ಕೆಯಾಗಿದ್ದು, ಅವರನ್ನು ಇದೀಗ ಪ್ರಧಾನಿ ಅಭ್ಯರ್ಥಿಯಾಗಿ ಮಾಡಲಾಗಿದೆ ಎಂದು ಪಕ್ಷದ ಉಪಾಧ್ಯಕ್ಷ ಬಿಷ್ಣೋ ಪ್ರಕಾಶ್ ಶರ್ಮಾ ತಿಳಿಸಿದ್ದಾರೆ.
Gen-Z ಪ್ರತಿಭಟನೆಗೆ ಸಾಕ್ಷಿಯಾಗಿದ್ದ ನೇಪಾಳದಲ್ಲಿ ಯುವ ಜನತೆಯನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ ಕ್ರಿಯಾಶೀಲ ನಾಯಕರಾಗಿರುವ ಗಗನ್ ಥಾಪಾ ಆಯ್ಕೆ ಕೂಡ ಸದ್ಯದ ಚುನಾವಣಾ ಸನ್ನಿವೇಶ ಬದಲಾಯಿಸಿದೆ ಎಂದು ಹಿರಿಯ ಮಾನವ ಹಕ್ಕು ಕಾರ್ಯಕರ್ತ ಚರಣ್ ಪ್ರಸಲ್ ತಿಳಿಸಿದ್ದಾರೆ. ಈ ನಡುವೆ ಗಗನ್ ಥಾಪಾ ನೇತೃತ್ವದ ನೇಪಾಳಿ ಕಾಂಗ್ರೆಸ್‌ಗೆ ಚುನಾವಣಾ ಆಯೋಗ ನೀಡಿದ ಅಧಿಕೃತ ಮಾನ್ಯತೆಯನ್ನು ನೇಪಾಳದ ಮಾಜಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಪ್ರಶ್ನಿಸಿದ್ದಾರೆ.
