
ಉದಯವಾಹಿನಿ, : ಪ್ರಧಾನಿ ಮೋದಿ ಅವರ ಆಹ್ವಾನದ ಮೇರೆಗೆ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಭಾರತಕ್ಕೆ ಭೇಟಿ ನೀಡುತ್ತಿರುವ ಬೆನ್ನಲ್ಲೇ, ಭಾರತ–ದುಬೈ ನಡುವಿನ ಐತಿಹಾಸಿಕ ಸಂಬಂಧ ಮತ್ತೆ ಗಮನ ಸೆಳೆದಿದೆ. ಈಗಿನ ದುಬೈ ಒಮ್ಮೆ ಬ್ರಿಟಿಷ್ ಆಡಳಿತದ ಕಾಲದಲ್ಲಿ ಭಾರತದ ಆಡಳಿತ ವ್ಯವಸ್ಥೆಯ ಭಾಗವಾಗಿತ್ತು ಎಂಬ ಸತ್ಯ ಅನೇಕರಿಗೆ ಅಚ್ಚರಿ ಉಂಟುಮಾಡುತ್ತದೆ.20ನೇ ಶತಮಾನದ ಆರಂಭದಲ್ಲಿ ಭಾರತ ಮಾತ್ರವಲ್ಲದೆ ದುಬೈ, ಅಬುಧಾಬಿ, ಕುವೈತ್ ಸೇರಿದಂತೆ ಹಲವು ಅರಬ್ ಪ್ರದೇಶಗಳು ಬ್ರಿಟಿಷ್ ಸಾಮ್ರಾಜ್ಯದ ನಿಯಂತ್ರಣದಲ್ಲಿದ್ದವು. ಈ ಎಲ್ಲಾ ಪ್ರದೇಶಗಳನ್ನು ದೆಹಲಿಯಿಂದಲೇ ನಿರ್ವಹಿಸಲಾಗುತ್ತಿತ್ತು. ಬ್ರಿಟಿಷ್ ಆಡಳಿತದಲ್ಲಿ ಇವುಗಳನ್ನು ‘ಭಾರತೀಯ ರಾಜಕೀಯ ಸೇವೆ’ ಮೂಲಕ ಆಡಳಿತ ನಡೆಸಲಾಗುತ್ತಿತ್ತು.
ಬಿಬಿಸಿ ವರದಿಗಳ ಪ್ರಕಾರ, ಈ ಅರಬ್ ರಾಷ್ಟ್ರಗಳನ್ನು ಕಾನೂನುಬದ್ಧವಾಗಿ ಭಾರತದ ಭಾಗವೆಂದು ಪರಿಗಣಿಸಲಾಗಿತ್ತು. ರಾಜಪ್ರಭುತ್ವದ ರಾಜ್ಯಗಳ ಅಧಿಕೃತ ಪಟ್ಟಿಯಲ್ಲಿ ಅಬುಧಾಬಿಯ ಹೆಸರೇ ಮೊದಲಿಗೆ ಬರುತ್ತಿತ್ತು. ಆದರೆ ಸಾರ್ವಜನಿಕರಿಗೆ ನೀಡುತ್ತಿದ್ದ ಭಾರತದ ನಕ್ಷೆಗಳಲ್ಲಿ ಈ ಅರಬ್ ಪ್ರದೇಶಗಳನ್ನು ಉದ್ದೇಶಪೂರ್ವಕವಾಗಿ ತೋರಿಸಲಾಗಿರಲಿಲ್ಲ. ಬ್ರಿಟಿಷ್ ಸರ್ಕಾರ ಅರಬ್ ರಾಷ್ಟ್ರಗಳನ್ನು ರಹಸ್ಯವಾಗಿ ಇಟ್ಟುಕೊಂಡಿದ್ದಕ್ಕೆ ಪ್ರಮುಖ ಕಾರಣ ರಾಜಕೀಯ ಸಂವೇದನೆ. ಸೌದಿ ಆಡಳಿತವನ್ನು ಕೆರಳಿಸಬಾರದೆಂಬ ಕಾರಣಕ್ಕೆ ಈ ಪ್ರದೇಶಗಳನ್ನು ಸಾರ್ವಜನಿಕ ನಕ್ಷೆಗಳಲ್ಲಿ ಮರೆಮಾಚಲಾಗಿತ್ತು. ಇದನ್ನು ಬಿಬಿಸಿ ವರದಿಯಲ್ಲಿ ‘ಪರದೆಯ ಹಿಂದೆ ಇಡಲಾಗಿದ್ದ ಇತಿಹಾಸ’ ಎಂದು ವಿವರಿಸಲಾಗಿದೆ.
ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ತೀವ್ರಗೊಳ್ಳುತ್ತಿದ್ದಂತೆ ಬ್ರಿಟನ್ ಆಡಳಿತಾತ್ಮಕ ಬದಲಾವಣೆಗಳಿಗೆ ಮುಂದಾಯಿತು. 1937ರಲ್ಲಿ ಏಡೆನ್ ಅನ್ನು ಭಾರತದಿಂದ ಬೇರ್ಪಡಿಸಲಾಯಿತು. ಬಳಿಕ 1947ರ ಏಪ್ರಿಲ್ 1ರಂದು, ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲುಲೇ ದುಬೈ ಮತ್ತು ಕುವೈತ್ ಅನ್ನು ಭಾರತದಿಂದ ಪ್ರತ್ಯೇಕಿಸಲಾಯಿತು. ಈ ಬದಲಾವಣೆಗಳು ಬಹಳ ಸದ್ದಿಲ್ಲದೆ ನಡೆದವು.
