ಉದಯವಾಹಿನಿ, : ಜಾಗತಿಕ ಕಚ್ಚಾತೈಲ ಮಾರುಕಟ್ಟೆ ಮತ್ತೆ ಆತಂಕದ ವಾತಾವರಣಕ್ಕೆ ಸಿಲುಕಿದೆ. ಇರಾನ್‌ನಲ್ಲಿನ ಆಂತರಿಕ ಅಸ್ಥಿರತೆ ಮತ್ತು ತೈಲ ಉದ್ಯಮದ ಕಾರ್ಮಿಕರ ಮುಷ್ಕರ ಭೀತಿ, ಪೆಟ್ರೋಲ್–ಡೀಸೆಲ್ ಬೆಲೆಗಳು ದಿಢೀರ್ ಏರಿಕೆಯಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ. ಯುದ್ಧದ ಬೆದರಿಕೆ ಸ್ವಲ್ಪ ತಗ್ಗಿದರೂ, ಇರಾನ್‌ನ ಒಳನಾಡು ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂಬುದು ತಜ್ಞರ ಎಚ್ಚರಿಕೆ. ಇರಾನ್ ಜಗತ್ತಿನ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದೆ. ದಿನಕ್ಕೆ ಸುಮಾರು 50 ಲಕ್ಷ ಬ್ಯಾರೆಲ್ ಕಚ್ಚಾತೈಲ ಉತ್ಪಾದಿಸುವ ದೇಶವಾಗಿರುವ ಇರಾನ್‌ನಲ್ಲಿ ತೈಲ ಸರಬರಾಜು ಅಡಚಣೆಯಾದರೆ, ಅದರ ಪರಿಣಾಮ ಇಡೀ ಜಗತ್ತಿನ ಮೇಲೆ ಬೀಳಲಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ತೈಲ ಪೂರೈಕೆಗೆ ಧಕ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಇತ್ತೀಚಿನ ದಿನಗಳಲ್ಲಿ ಇರಾನ್‌ನಲ್ಲಿ ನಡೆದ ಪ್ರತಿಭಟನೆಗಳನ್ನು ಸರ್ಕಾರ ಕಠಿಣವಾಗಿ ಹತ್ತಿಕ್ಕಿದೆ. ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಎನ್ನುವ ವರದಿಗಳು ಹೊರಬಿದ್ದಿವೆ. ಈ ದಮನದ ಪರಿಣಾಮವಾಗಿ ದೇಶದಲ್ಲಿ ನಾಗರಿಕ ಅಸಹಕಾರ ಚಳವಳಿ ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ತೈಲ ಹಾಗೂ ಅನಿಲ ವಲಯದ ಕಾರ್ಮಿಕರು ಮುಷ್ಕರಕ್ಕೆ ಇಳಿದರೆ, ಅದು ಜಾಗತಿಕ ತೈಲ ಮಾರುಕಟ್ಟೆಗೆ ಭಾರೀ ಆಘಾತ ನೀಡಲಿದೆ.
ಇತಿಹಾಸವೂ ಇದೇ ಎಚ್ಚರಿಕೆಯನ್ನು ನೀಡುತ್ತದೆ. 1978–79ರಲ್ಲಿ ಇರಾನ್‌ನಲ್ಲಿ ನಡೆದ ತೈಲ ಕಾರ್ಮಿಕರ ಮುಷ್ಕರದಿಂದ ಉತ್ಪಾದನೆ ಶೇ.80ರಷ್ಟು ಕುಸಿದಿತ್ತು. ಅದೇ ಮುಷ್ಕರ ಇರಾನ್ ಕ್ರಾಂತಿಗೆ ದಾರಿ ಮಾಡಿಕೊಟ್ಟಿತ್ತು. ಈಗ ಮತ್ತೆ ಅಂಥದೇ ಪರಿಸ್ಥಿತಿ ಮರುಕಳಿಸಬಹುದೇ ಎಂಬ ಪ್ರಶ್ನೆ ಎದ್ದಿದೆ. ಇರಾನ್‌ನ ಮಾಜಿ ಶಾ ಪುತ್ರ ರೆಜಾ ಪಹ್ಲವಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ಇಂದಿನ ಪರಿಸ್ಥಿತಿ ಹಿಂದಿನಂತಿಲ್ಲ. ಇಂದಿನ ತೈಲ ಉದ್ಯಮ ಸಂಪೂರ್ಣವಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ ನಿಯಂತ್ರಣದಲ್ಲಿ ಇದೆ. ಬಹುತೇಕ ಕಾರ್ಮಿಕರು ಗುತ್ತಿಗೆ ಆಧಾರಿತವಾಗಿದ್ದು, ಉದ್ಯೋಗ ಭದ್ರತೆ ಇಲ್ಲದ ಕಾರಣ ಮುಷ್ಕರಕ್ಕೆ ಇಳಿಯಲು ಹಿಂಜರಿಯುವ ಸಾಧ್ಯತೆಯೂ ಇದೆ. ಭದ್ರತಾ ಪಡೆಗಳು ತೈಲ ಕ್ಷೇತ್ರಗಳ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಿವೆ.
ತಜ್ಞರ ಅಭಿಪ್ರಾಯದಂತೆ, ತಕ್ಷಣಕ್ಕೆ ತೈಲ ಸರಬರಾಜು ಸ್ಥಗಿತವಾಗುವ ಸಾಧ್ಯತೆ ಕಡಿಮೆ. ಆದರೆ ಕಾರ್ಮಿಕ ಮುಷ್ಕರ ಆರಂಭವಾದರೆ, ಅದರ ಪರಿಣಾಮಗಳು ವಿನಾಶಕಾರಿಯಾಗಬಹುದು. ಬಾಂಬ್‌ಗಳಿಗಿಂತಲೂ ಅಪಾಯಕಾರಿ ಅಸ್ತ್ರವೆಂದರೆ ತೈಲ ಬಾವಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ನಿರ್ಧಾರ. ಅದಕ್ಕಾಗಿಯೇ ಜಗತ್ತಿನ ಮಾರುಕಟ್ಟೆಗಳು ಇರಾನ್‌ನ ಒಳರಾಜಕೀಯ ಬೆಳವಣಿಗೆಯನ್ನು ಆತಂಕದಿಂದ ಗಮನಿಸುತ್ತಿವೆ.