ಉದಯವಾಹಿನಿ, ನವದೆಹಲಿ: ಬಿಜೆಪಿಯಲ್ಲಿಗ ಹೊಸ ತಲೆಮಾರು ಶುರುವಾಗಿದೆ. ರಾಜನಾಥ್‌ಸಿಂಗ್, ಗಡ್ಕರಿ, ಅಮಿತ್ ಶಾ, ನಡ್ಡಾ ಬಳಿಕ ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಆಯ್ಕೆಯಾಗಿದ್ದಾರೆ.
ಕೇವಲ 45 ವರ್ಷಕ್ಕೆ ಪಕ್ಷಕ್ಕೆ ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಇವತ್ತು ನಿತಿನ್ ನಬಿನ್ ಒಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ್ದು, ಪ್ರಧಾನಿ ಮೋದಿ , ಅಮಿತ್ ಶಾ, ನಡ್ಡಾ ಸೇರಿದಂತೆ ಎಲ್ಲ ನಾಯಕರು ಅನುಮೋದಿಸಿದ್ದಾರೆ.
ಮಂಗಳವಾರ ಬೆಳಗ್ಗೆ 11:30ಕ್ಕೆ ನಿತಿನ್ ನಬಿನ್ ಅಧಿಕಾರ ಸ್ವೀಕರಿಸಲಿದ್ದಾರೆ. ಸಂಘಟನಾ ಪರ್ವ ಹೆಸರಿನಲ್ಲಿ ನಡೆಯುತ್ತಿರುವ ಈ ಬದಲಾವಣೆಗೆ ಬಿಜೆಪಿ ಸಿಎಂಗಳು, ರಾಜ್ಯಾಧ್ಯಕ್ಷರು, ಹಿರಿಯ ನಾಯಕರು ಕೂಡ ಸಾಕ್ಷಿಯಾಗಿದ್ದಾರೆ.
ಬಿಹಾರ ಬಿಜೆಪಿಯ ಹಿರಿಯ ನಾಯಕ, ಪಾಟ್ನಾದಿಂದ 4 ಬಾರಿ ಎಂಎಲ್‌ಎ ಆಗಿದ್ದ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿಂಹ ಅವರ ಮಗನಾಗಿರುವ ನಿತಿನ್, ತಂದೆಯ ನಿಧನದ ಬಳಿಕ ಬಿಹಾರದ ಬಿಜೆಪಿಯಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಆರ್‌ಎಸ್‌ಎಸ್ ಜೊತೆಗೂ ಅವಿನಾಭಾವ ಸಂಬಂಧ ಹೊಂದಿರುವ ನಬಿನ್, ಸಂಘಟನಾ ಚತುರ ಅಂತಲೇ ಗುರುತಿಸಿಕೊಂಡಿದ್ದಾರೆ. ಹಳೆತಲೆಮಾರಿನ ನಾಯಕರು ಹೊಸ ತಲೆಮಾರಿಗೆ ದಾರಿ ಮಾಡಿಕೊಡಬೇಕಿದೆ ಎಂದು ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿರೋ ಹೇಳಿಕೆ ವ್ಯಾಪಕ ಚರ್ಚೆ ಆಗುತ್ತಿದೆ.
