ಉದಯವಾಹಿನಿ, ಪ್ಯಾರಿಸ್: ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರಗೊಂಡಿದ್ದು, ಅಲ್ಲಿನ ಸರ್ಕಾರವು ಪ್ರತಿಭಟನಾಕಾರರಿಗೆ ಕೊನೆಯ ಎಚ್ಚರಿಕೆ ನೀಡಿದೆ. ಗಲಭೆಯಲ್ಲಿ ಭಾಗವಹಿಸಿದ ಪ್ರತಿಭಟನಾಕಾರರು ಮೂರು ದಿನಗಳಲ್ಲಿ ಶರಣಾಗಬೇಕು. ಇಲ್ಲದಿದ್ದರೆ ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇರಾನ್‌ನ ಉನ್ನತ ಪೊಲೀಸ್ ಅಧಿಕಾರಿ ಅಹ್ಮದ್ – ರೆಜಾ ರಾಡನ್ ಸೋಮವಾರ ಅಂತಿಮ ಗಡುವು ನೀಡಿದ್ದಾರೆ.ಗಲಭೆಯಲ್ಲಿ ಭಾಗಿಯಾಗುವಂತೆ ಒತ್ತಾಯಿಸಲ್ಪಟ್ಟ ಯುವಕರು ಶರಣಾಗಬೇಕು. ನೀಡುವ ಶಿಕ್ಷೆಗೂ ಗುರಿಯಾಗಬೇಕು, ಇಲ್ಲದಿದ್ದರೆ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಉದ್ದೇಶಪೂರ್ವಕವಾಗಿ ಗಲಭೆಯಲ್ಲಿ ಭಾಗವಹಿಸಿದವರನ್ನು ಶತ್ರು ಸೈನಿಕರು ಎಂದು ಪರಿಗಣಿಸಲಾಗುತ್ತದೆ. ಗೊತ್ತಿದ್ದರೂ ಗಲಭೆಯಲ್ಲಿ ಭಾಗಿದ್ದವರನ್ನು ರಾಷ್ಟ್ರದ್ರೋಹಿಗಳೆಂದು ಪಟ್ಟ ಕಟ್ಟಿ ಕೆಟ್ಟದಾಗಿ ನಡೆಸಿಕೊಳ್ಳಲಾಗುವುದು ಎಂದು ರಾಡನ್ ಎಚ್ಚರಿಕೆ ನೀಡಿದ್ದಾರೆ.
ಆರಂಭದಲ್ಲಿ ಶಾಂತಿಯುತವಾಗಿ ನಡೆದ ಪ್ರತಿಭಟನೆಗಳು ನಂತರ ಹಿಂಸಾತ್ಮಕವಾಗಿ ಮಾರ್ಪಟ್ಟಿದ್ದು, ನೋವಿನ ಸಂಗತಿ. ಇರಾನ್‌ನ ಪರಮ ವೈರಿಗಳಾದ ಅಮೆರಿಕ ಮತ್ತು ಇಸ್ರೇಲ್ ನಮ್ಮ ದೇಶವನ್ನು ಅಸ್ಥಿರಗೊಳಿಸಲು ನಡೆಸುತ್ತಿರುವ ಪ್ರಯತ್ನದ ಫಲವಾಗಿ ಇಂತಹ ಘಟನೆಗಳು ನಡೆದಿವೆ. ಇರಾನ್‌ನ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಒಂದಾಗಿ ಕೆಲಸ ಮಾಡುವ ಮೂಲಕ ದೇಶದ ಆರ್ಥಿಕ ಮತ್ತು ಜೀವನೋಪಾಯದ ಸಮಸ್ಯೆಗಳನ್ನು ಪರಿಹರಿಸಲು ಎಲ್ಲಾ ಅಧಿಕಾರಿಗಳು ದಿನದ 24 ಗಂಟೆಗಳ ಕಾಲ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೆ ತಾವು ಕೂಡ ಕೈಜೋಡಿಸಿ. ಪ್ರತಿಭಟನೆಗಳಿಗೆ ಕಾರಣವಾಗಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎಂದು ರಾಡನ್ ಇದೇ ವೇಳೆ ಭರವಸೆ ನೀಡಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಮತ್ತು ನ್ಯಾಯಾಂಗ ಮುಖ್ಯಸ್ಥ ಘೋಲಮ್‌ಹೊಸೇನ್ ಮೊಹ್ಸೆನ್ ಎಜೆಯ್ ಮಾತನಾಡಿ, ದೇಶದ ವಿರುದ್ಧ ತಿರುಗಿಬಿದ್ದ ಭಯೋತ್ಪಾದಕ ಘಟನೆಗಳನ್ನು ಪ್ರಚೋದಿಸುವವರನ್ನು ಶಿಕ್ಷಿಸದೇ ಬಿಡಲಾಗದು ಎಂದು ಗುಡುಗಿದ್ದಾರೆ.
ಇರಾನ್‌ನಲ್ಲಿ ಭುಗಿಲೆದ್ದಿರುವ ಸರ್ಕಾರ ವಿರೋಧಿ ಪ್ರತಿಭಟನೆ ಎರಡನೇ ವಾರಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯನ್ನು ಹತ್ತಿಕ್ಕುವ ಇಲ್ಲಿನ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿ ಸರ್ಕಾರದ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ, ಇದೀಗ ಪ್ರತಿಭಟನಾಕಾರರಿಗೆ ಕೊನೆಯ ಗಡುವು ನೀಡಲಾಗಿದೆ. ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆಯುತ್ತಿದ್ದರಿಂದ ದೇಶಾದ್ಯಂತ ಇಂಟರ್ನೆಟ್ ಕೂಡ ಕಡಿತಗೊಳಿಸಲಾಗಿದೆ. ಆದರೂ, ಪೂರ್ಣ ಪ್ರಮಾಣದಲ್ಲಿ ಹಿಂಸಾಚಾರ ನಿಂತಿಲ್ಲ. ಹಾಗಾಗಿ ಪ್ರತಿಭಟನೆಯನ್ನು ಹತ್ತಿಕ್ಕುವುದು ಇರಾನ್‌ನ ನಾಯಕರಿಗೆ ಅತಿದೊಡ್ಡ ಸವಾಲಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
