ಉದಯವಾಹಿನಿ, ಕರಾಚಿ : ಪಾಕಿಸ್ತಾನದ ಆರ್ಥಿಕ ರಾಜಧಾನಿಯಾಗಿರುವ ಕರಾಚಿಯಲ್ಲಿನ ಶಾಪಿಂಗ್ ಮಾಲ್ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಲ್ಲಿಯವರೆಗೆ 26 ಮಂದಿ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ. ಅಗ್ನಿಯ ತೀವ್ರತೆ ಹೆಚ್ಚಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಳೆದೆರಡು ದಿನಗಳ ಹಿಂದೆ ಅಂದರೆ ಶನಿವಾರ ರಾತ್ರಿ ಗುಲ್ ಪ್ಲಾಜಾದಲ್ಲಿ ಅಗ್ನಿ ಅನಾಹುತ ನಡೆದಿತ್ತು. ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಾಗಿರುವ ಈ ಮಾಲ್ನಲ್ಲಿ ಮೂರಕ್ಕೂ ಹೆಚ್ಚು ಮಹಡಿಗಳಿದ್ದು, ಅಗ್ನಿ ಸ್ಫೋಟಗೊಂಡ ಸುಮಾರು 24 ಗಂಟೆಗಳ ನಂತರ ಭಾನುವಾರ ರಾತ್ರಿ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.
ಈ ದುರಂತದಲ್ಲಿ ಇದುವರೆಗೆ 26 ಮೃತ ದೇಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಹಲವರನ್ನು ರಕ್ಷಣೆ ಮಾಡಲಾಗಿದೆ ಎಂದು ವಕ್ತಾರ ಅಸ್ಸಾನ್ ಉಲ್ ಹಸೀಬ್ ಖಾನ್ ತಿಳಿಸಿದ್ದಾರೆ. ಕರಾಚಿ ಆಯುಕ್ತ ಅಸ್ಸಾನ್ ನಖ್ವಿ ಘಟನೆ ಮಾಹಿತಿ ನೀಡಿದ್ದು, ಸಾವಿನ ಸಂಖ್ಯೆ 50 ರವರೆಗೆ ಏರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಸಿಂಧ್ ಮುಖ್ಯಮಂತ್ರಿ ಮುರಾದ್ ಆಲಿ ಶಾ, ಸಂತ್ರಸ್ತ ಕುಟುಂಬಗಳಿಗೆ 10 ಮಿಲಿಯನ್ ಪಾಕಿಸ್ತಾನ ರೂಪಾಯಿಗಳ ಪರಿಹಾರ ಘೋಷಣೆ ಮಾಡಿದ್ದಾರೆ.
ಘಟನೆ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಶಾ, ಇದುವರೆಗೆ 15 ಮೃತ ದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಗುಲ್ ಪ್ಲಾಜಾಗೆ ಬಂದಿದ್ದ ಜನರಲ್ಲಿ 65 ಮಂದಿ ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿದೆ. ಒಟ್ಟಾರೆ 80 ಜನರು ಸಾವನ್ನಪ್ಪಿರುವ ಶಂಕೆ ಇದೆ. ಜೀವಕ್ಕೆ ಬೆಲೆಯನ್ನು ಕಟ್ಟಲು ಸಾಧ್ಯವಿಲ್ಲ. ಕುಟುಂಬಗಳ ದುಃಖವನ್ನು ಪರಿಹಾರದ ರೂಪದಲ್ಲಿ ಸರಿದೂಗಿಸಲು ಸಾಧ್ಯವಿಲ್ಲ. ಆದರೆ, ಸರ್ಕಾರದ ವತಿಯಿಂದ ಸಾವನ್ನಪ್ಪಿದ ಪ್ರತಿ ವ್ಯಕ್ತಿ 10 ಮಿಲಿಯನ್ ಪಾಕಿಸ್ತಾನ ರೂಪಾಯಿ ಪರಿಹಾರ ಘೋಷಣೆ ಮಾಡಲಾಗುವುದು. ಮಂಗಳವಾರದಿಂದ ಸಂತ್ರಸ್ತರ ಕುಟುಂಬಕ್ಕೆ ಈ ಪರಿಹಾರ ಸಿಗಲಿದೆ ಎಂದರು.
ಪ್ಲಾಜಾದಲ್ಲಿನ ವ್ಯಾಪಾರಿಗಳ ನಷ್ಟವನ್ನು ಅಂದಾಜಿಸಲು ಅವರಿಗೆ ಉದ್ಯಮ ಪುನಶ್ಚೇತನಕ್ಕೆ ಅವಕಾಶ ನೀಡುವ ಕುರಿತು ಅಂದಾಜಿಸಿ ಪರಿಶೀಲನೆ ನಡೆಸಲು ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಆರಂಭಿಕ ಅಂದಾಜಿನ ಪ್ರಕಾರ ಕಟ್ಟಡದಲ್ಲಿ ಅಂಗಡಿಗಳನ್ನು ಹೊಂದಿದ್ದ ವ್ಯಾಪಾರಿಗಳು ಸುಮಾರು 3 ಬಿಲಿಯನ್ ಪಾಕಿಸ್ತಾನ ರೂಪಾಯಿ ಮೌಲ್ಯದ ಸರಕುಗಳನ್ನು ಕಳೆದುಕೊಂಡಿದ್ದಾರೆ ಎಂದರು.
