ಉದಯವಾಹಿನಿ , : ಬಾಲಿವುಡ್ ಖ್ಯಾತ ಗಾಯಕಿ ನೇಹಾ ಕಕ್ಕರ್ ಸದ್ಯ ವೈಯಕ್ತಿಕ ಜೀವನದ ಬಗ್ಗೆಯೂ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು ತಮ್ಮ ಸಂಬಂಧ ಮತ್ತು ಕೆಲಸದಿಂದ ವಿರಾಮ ಪಡೆಯುವ ಘೋಷಣೆ ಮಾಡಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದರು. ಇದರಿಂದಾಗಿ ಪತಿ ರೋಹನ್‌ಪ್ರೀತ್ ಸಿಂಗ್ ಜತೆ ವಿಚ್ಛೇದನ ಪಡೆಯಲಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಈ ವಿಚಾರವನ್ನು ತಳ್ಳಿ ಹಾಕಿರುವ ಅವರು, ಸಣ್ಣ ವಿಚಾರವನ್ನು ಈ ರೀತಿಯಾಗಿ ಹಬ್ಬಿಸಿರುವ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
ಸಿಂಗರ್ ನೇಹಾ ಕಕ್ಕರ್ ತಮ್ಮ ಅಫೀಶಿಯಲ್ ಇನ್‌ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಎರಡು ಪೋಸ್ಟ್‌ಗಳನ್ನು ಶೇರ್ ಮಾಡಿದ್ದರು. “ನಾನು ಜವಾಬ್ದಾರಿಗಳು, ಕೆಲಸ ಮತ್ತು ಸಂಬಂಧಗಳಿಂದ ವಿರಾಮ ಪಡೆಯುತ್ತಿದ್ದೇನೆ. ಮತ್ತೆ ಸಿಗುತ್ತೇನೋ ಗೊತ್ತಿಲ್ಲ’ ಎಂದು ವಿದಾಯದ ಪೋಸ್ಟ್ ಹಾಕಿದ್ದರು.
ಮತ್ತೊಂದು ಪೋಸ್ಟ್‌ನಲ್ಲಿ “ಪಾಪರಾಜಿಗಳು ಮತ್ತು ಅಭಿಮಾನಿಗಳು ನನ್ನ ಫೋಟೊ, ವಿಡಿಯೊ ತೆಗೆಯದಂತೆ ವಿನಂತಿಸುತ್ತೇನೆ. ನೀವು ನನ್ನ ಗೌಪ್ಯತೆಯನ್ನು ಗೌರವಿಸಿ. ನನ್ನನ್ನು ಮುಕ್ತವಾಗಿ ಬದುಕಲು ಬಿಡುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದು ಬರೆದುಕೊಂಡಿದ್ದರು. ಇದನ್ನು ಗಮನಿಸಿದ ಹೆಚ್ಚಿನವರು ಇವರು ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಚರ್ಚೆ ಮಾಡಿದ್ದರು.
ಸದ್ಯ ಈ ಪೋಸ್ಟ್‌ಗಳು ವೈರಲ್ ಆಗುತ್ತಿದ್ದಂತೆಯೇ ನೇಹಾ ಅವುಗಳನ್ನು ಡಿಲೀಟ್ ಮಾಡಿದ್ದಾರೆ. ಈ ಬಗ್ಗೆ ನೇಹಾ ಪ್ರತಿಕ್ರಿಯೆ ನೀಡಿದ್ದು ಸಣ್ಣ ವಿಚಾರವನ್ನು ದೊಡ್ಡದು ಮಾಡುವುದರಲ್ಲಿ ಮಾಧ್ಯಮದವರು ನಿಸ್ಸಿಮರಾಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. “ನನ್ನ ಪತಿ ಅಥವಾ ನನ್ನ ಕುಟುಂಬವನ್ನು ಈ ವಿಚಾರಕ್ಕೆ ಎಳೆದು ತರಬೇಡಿ. ಅವರು ಅತ್ಯಂತ ಪ್ರಾಮಾಣಿಕರು. ನಾನಿಂದು ಇಷ್ಟು ಬೆಳೆಯಲು ಅವರ ಬೆಂಬಲವೇ ಕಾರಣ” ಎಂದು ನೇಹಾ ಹೇಳಿಕೊಂಡಿದ್ದಾರೆ.
