ಉದಯವಾಹಿನಿ , ಇನ್ನು ಆಡೋಕಾಗೋದಿಲ್ಲ. ಈಗಿನ ಫಾಸ್ಟ್ ಸ್ಪೋರ್ಟ್ಸ್ಗೆ ನನ್ನ ದೇಹ ಒಗ್ಗಿಕೊಳ್ಳೋದು ಅಸಾಧ್ಯ ಎಂದು ಹೇಳಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ನಿವೃತ್ತಿ ಘೋಷಿಸಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇದೀಗ ಬ್ಯಾಡ್ಮಿಂಟನ್ ಅಂಗಳಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಅಲ್ಲದೆ ಇನ್ನುಂದೆ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಸಹ ಸ್ಪಷ್ಟಪಡಿಸಿದ್ದಾರೆ. ಸೈನಾ ನೆಹ್ವಾಲ್ ಕೊನೆಯ ಸ್ಪರ್ಧಾತ್ಮಕ ಪಂದ್ಯವಾಡಿದ್ದು 2023ರಲ್ಲಿ. 2023ರ ಸಿಂಗಾಪುರ್ ಓಪನ್ ನಂತರ ಅವರು ಯಾವುದೇ ಅಧಿಕೃತ ಪಂದ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಗಾಯದ ಸಮಸ್ಯೆಯಾಗಿತ್ತು.
ಸಂಪೂರ್ಣ ಫಿಟ್‌ನೆಸ್ ಕಷ್ಟ!
ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ಎರಡು ವರ್ಷಗಳಿಂದ ಕಂಬ್ಯಾಕ್ ಮಾಡಲು ಯತ್ನಿಸಿದ್ದರು. ಇದಾಗ್ಯೂ ಸಂಪೂರ್ಣ ಫಿಟ್‌ನೆಸ್ ಸಾಧಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ವರ್ಷದ ಆರಂಭದಲ್ಲೇ ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.
ನೋವಿನ ಜೊತೆ ಅಭ್ಯಾಸ ಮಾಡೋಕಾಗ್ತಿಲ್ಲ
ಪಾಡ್‌ಕ್ಯಾಸ್ಟ್‌ವೊಂದರಲ್ಲಿ ಮಾತನಾಡಿದ ಸೈನಾ ನೆಹ್ವಾಲ್, ತನ್ನ ದೇಹವು ಇನ್ನು ಮುಂದೆ ತನ್ನ ಆಟವನ್ನು ಬೆಂಬಲಿಸುವುದಿಲ್ಲ. ಹೀಗಾಗಿ ಬ್ಯಾಡ್ಮಿಂಟನ್‌ನಲ್ಲಿ ಇನ್ಮುಂದೆ ಮುಂದುವರೆಯಲು ಸಾಧ್ಯವಿಲ್ಲ. ಮೊಣಕಾಲಿನ ನೋವಿನ ಸಮಸ್ಯೆಯಿರುವ ಕಾರಣ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ಏಕೆಂದರೆ ಈ ನೋವಿನೊಂದಿಗೆ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇನ್ಮುಂದೆ ನಾನು ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು 35 ವರ್ಷದ ಸೈನಾ ನೆಹ್ವಾಲ್ ಹೇಳಿದ್ದಾರೆ.
