ಉದಯವಾಹಿನಿ , ಟಿ20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದರೂ ಬಾಂಗ್ಲಾದೇಶ ತಂಡದ ಭಾಗವಹಿಸುವಿಕೆ ಇನ್ನೂ ಸ್ಪಷ್ಟವಾಗಿಲ್ಲ. ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ (BCB) ಮತ್ತು ಐಸಿಸಿ ನಡುವಿನ ಭಿನ್ನಾಭಿಪ್ರಾಯ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ಈ ಹಿಂದೆ ಭಾರತದಲ್ಲಿ ನಿಗದಿಯಾಗಿದ್ದ ತನ್ನ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಿಸಿಬಿ ಮನವಿ ಮಾಡಿತ್ತು. ಆದರೆ ಐಸಿಸಿ ಆ ಬೇಡಿಕೆಯನ್ನು ತಿರಸ್ಕರಿಸಿತ್ತು. ಇದೀಗ ಬಾಂಗ್ಲಾದೇಶ್ ಮತ್ತೊಂದು ಮಾರ್ಗವನ್ನು ಮುಂದಿಟ್ಟು, ಟೂರ್ನಿಯ ಗ್ರೂಪ್ ವಿನ್ಯಾಸವನ್ನೇ ಬದಲಿಸುವಂತೆ ಐಸಿಸಿಗೆ ಪ್ರಸ್ತಾವನೆ ಸಲ್ಲಿಸಿದೆ.
ಪ್ರಸ್ತುತ ವೇಳಾಪಟ್ಟಿಯಂತೆ ಐರ್ಲೆಂಡ್ ತಂಡ ಗ್ರೂಪ್-2ರಲ್ಲಿ ಇದ್ದು ತನ್ನ ಎಲ್ಲಾ ಲೀಗ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಇತ್ತ ಬಾಂಗ್ಲಾದೇಶ್ ಗ್ರೂಪ್-3ರಲ್ಲಿ ಇದ್ದು, ಭಾರತದಲ್ಲಿ ಪಂದ್ಯಗಳನ್ನಾಡಬೇಕಾಗಿದೆ. ಈ ಕಾರಣದಿಂದ, ಬಾಂಗ್ಲಾದೇಶ್ ತಂಡವನ್ನು ಗ್ರೂಪ್-2ಕ್ಕೆ ಸೇರಿಸಿ, ಐರ್ಲೆಂಡ್ ತಂಡವನ್ನು ಗ್ರೂಪ್-3ಕ್ಕೆ ಸ್ಥಳಾಂತರಿಸುವಂತೆ ಬಿಸಿಬಿ ಮನವಿ ಮಾಡಿದೆ.
ಈ ಬದಲಾವಣೆ ಆದರೆ ಬಾಂಗ್ಲಾದೇಶ್ ತನ್ನ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲೇ ಆಡಲು ಅವಕಾಶ ಸಿಗಲಿದೆ. ಇದೇ ಕಾರಣಕ್ಕೆ ಗ್ರೂಪ್ ಸ್ವಾಪ್ ಪ್ರಸ್ತಾವನೆ ಮುಂದಿಟ್ಟಿರುವುದಾಗಿ ತಿಳಿದುಬಂದಿದೆ.
