ಉದಯವಾಹಿನಿ, ವಾಷಿಂಗ್ಟನ್: ಸುದೀರ್ಘ ಬಾಹ್ಯಾಕಾಶ ನಡಿಗೆ ಪೂರೈಸಿದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಭಾರತ ಮೂಲದ ಸುನಿತಾ ವಿಲಿಯಮ್ಸ್ ನಾಸಾದಿಂದ ನಿವೃತ್ತಿಯಾಗಿದ್ದಾರೆ. 2025ರ ಡಿ.27ರಂದು ಸುನಿತಾ ನಿವೃತ್ತಿಯಾಗಿದ್ದಾರೆ ಎಂದು ನಾಸಾ ಮಂಗಳವಾರ ಘೋಷಿಸಿದೆ. ಇದರೊಂದಿಗೆ 27 ವರ್ಷಗಳ ಸುದೀರ್ಘ ಜರ್ನಿಗೆ ಗುಡ್‌ಬೈ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್, ಸುನಿತಾ ವಿಲಿಯಮ್ಸ್ ಅವರನ್ನ ಮಾನವ ಬಾಹ್ಯಾಕಾಶ ಹಾರಾಟದ ಪ್ರವರ್ತಕಿ ಎಂದು ಬಣ್ಣಿಸಿದರು. ವಿಜ್ಞಾನ ಮತ್ತು ತಂತ್ರಜ್ಞನಕ್ಕೆ ಸುನಿತಾ ಅವರು ನೀಡಿದ ಕೊಡುಗೆಗಳು ಅಪಾರ. ಅವರ ಯೋಜನೆಗಳು ಚಂದ್ರ ಮತ್ತು ಮಂಗಳ ಗ್ರಹದತ್ತ ತೆರಳುವ ನಮ್ಮ ಪ್ರಯತ್ನಗಳಿಗೆ ಭದ್ರ ಅಡಿಪಾಯವಾಗಿದೆ. ಅವರ ಸಾಧನೆಗಳು ಮುಂದಿನ ಪೀಳಿಗೆಗೆ ಪ್ರೇರಣೆ. ನಾಸಾ ಮತ್ತು ನಮ್ಮ ರಾಷ್ಟ್ರಕ್ಕೆ ಸುನಿತಾ ಅವರು ನೀಡಿದ ಗಣನೀಯ ಸೇವೆಗೆ ಧನ್ಯವಾದಗಳು ಎಂದು ಶ್ಲಾಘಿಸಿದರು.
27 ವರ್ಷಗಳ ಸುದೀರ್ಘ ಜರ್ನಿ: 1998ರಲ್ಲಿ ನಾಸಾಗೆ ಆಯ್ಕೆಯಾದ ಸುನಿತಾ ವಿಲಿಯಮ್ಸ್ ಅವರು 3 ಮಿಷನ್‌ಗಳಲ್ಲಿ ಒಟ್ಟು 608 ದಿನಗಳ ಕಾರ್ಯಾಚರಣೆ ನಡೆಸಿದ್ದಾರೆ. ಗಗನಯಾತ್ರಿ ಬುಚ್ ವಿಲ್ಮೋರ್ ಜೊತೆಗೆ 286 ದಿನಗಳ ಪ್ರಯಾಣ ಅತಿ ಉದ್ಧದ ಬಾಹ್ಯಾಕಾಶ ಯಾನವಾಗಿದೆ. 8 ದಿನಗಳ ಮಿಷನ್‌ಗಾಗಿ ತೆರಳಿದ್ದ ಸುನಿತಾ ಅವರು 286 ದಿನ ಬಾಹ್ಯಾಕಾಶದಲ್ಲಿ ಕಳೆದಿದ್ದರು. ಬೋಯಿಂಗ್ ಸ್ಟಾರ್ ಲೈನರ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ ಸುನಿತಾ ಅವರು 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ಪೂರೈಸಿದ್ದರು. ಈ ಮೂಲಕ ಸುದೀರ್ಘ ಬಾಹ್ಯಾಕಾಶ ನಡಿಗೆ ಪೂರೈಸಿದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೂ ಪಾತ್ರವಾದರು. ವಿಲಿಯಮ್ಸ್ ಮತ್ತು ವಿಲ್ಮೋರ್ ತಮ್ಮ ಕಾರ್ಯಾಚರಣೆಯ ಸಮಯದಲ್ಲಿ 12,13,47,491 ಮೈಲುಗಳು ಪ್ರಯಾಣಿಸಿದ್ದರು.
