ಉದಯವಾಹಿನಿ, ಮುಂಬೈ: ಪುಣೆಯ ಅಪಾರ್ಟ್‌ಮೆಂಟ್ ಆವರಣದಲ್ಲಿ ಸೈಕಲ್ ಸವಾರಿ ಮಾಡುತ್ತಿದ್ದ ಐದು ವರ್ಷದ ಬಾಲಕನ ಮೇಲೆ ಕಾರು ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಲೋನಿ ಕಲ್ಭೋರ್ ಪ್ರದೇಶದಲ್ಲಿ ನಡೆದಿದೆ. ನಿಷ್ಕರ್ಷ್ ಅಶ್ವತ್ ಸ್ವಾಮಿ (5) ಮೃತ ಬಾಲಕ. ಬಾಲಕ ತನ್ನ ಕುಟುಂಬದೊಂದಿಗೆ ಜಾಯ್ ನೆಸ್ಟ್ ಸೊಸೈಟಿಯಲ್ಲಿ ವಾಸಿಸುತ್ತಿದ್ದ. ಸೋಮವಾರ ಮಧ್ಯಾಹ್ನ 3:30ರ ಸುಮಾರಿಗೆ ನಿಷ್ಕರ್ಷ್ ತನ್ನ ಅಜ್ಜಿಯೊಂದಿಗೆ ಅಪಾರ್ಟ್‌ಮೆಂಟ್ ಆವರಣದಲ್ಲಿ ಆಟವಾಡುತ್ತಿದ್ದ. ಈ ವೇಳೆ ವೇಗವಾಗಿ ಬಂದ ಕಾರೊಂದು ಬಾಲಕನಿಗೆ ಡಿಕ್ಕಿ ಹೊಡೆದು ಆತನ ಮೇಲೆ ಹರಿದಿದೆ. ಘಟನೆಯ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತವಾದ ಕೂಡಲೇ ಕಾರು ಚಾಲಕ ತಕ್ಷಣ ಕಾರಿನಿಂದ ಇಳಿದು ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಅಷ್ಟು ಹೊತ್ತಿಗಾಗಲೇ ಬಾಲಕ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು.
