ಉದಯವಾಹಿನಿ,ಜಾರ್ಖಂಡ್ : ಪಶ್ಚಿಮ ಸಿಂಗ್‌ಭೂಮ್‌ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಜಾರ್ಖಂಡ್ ಪೊಲೀಸರು ನಡೆಸುತ್ತಿರುವ ಜಂಟಿ ಕಾರ್ಯಾಚರಣೆಯು ಪ್ರದೇಶವನ್ನು ಮಾವೋವಾದ ಮುಕ್ತಗೊಳಿಸುವ ಅಭಿಯಾನದಲ್ಲಿ ಪ್ರಮುಖ ಯಶಸ್ಸನ್ನು ಸಾಧಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ತಲೆಗೆ 1 ಕೋಟಿ ರೂ.ಗಳ ಬಹುಮಾನ ಹೊಂದಿದ್ದ ಮಾವೋವಾದಿಯನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಆತ ಮಾವೋವಾದಿ ಕೇಂದ್ರ ಸಮಿತಿಯ ಸದಸ್ಯರನ್ನು ಪತಿರಾಮ್ ಮಾಂಝಿ ಎಂದು ಗುರುತಿಸಲಾಗಿದೆ. ‘1 ಕೋಟಿ ಮೌಲ್ಯದ ಕುಖ್ಯಾತ ಬೌಂಟಿ-ವಾಂಟೆಡ್ ನಕ್ಸಲ್ ಕೇಂದ್ರ ಸಮಿತಿ ಸದಸ್ಯ ಅನಲ್ ಅಲಿಯಾಸ್ ಪತಿರಾಮ್ ಮಾಂಝಿ ಮತ್ತು ಇದುವರೆಗೆ 15 ಇತರ ನಕ್ಸಲರನ್ನು ಹತ್ಯೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.ಎಡಪಂಥೀಯ ಉಗ್ರವಾದವನ್ನು ಕೊನೆಗೊಳಿಸುವ ಕೇಂದ್ರದ ಸಂಕಲ್ಪವನ್ನು ಪುನರುಚ್ಚರಿಸಿದ ಗೃಹ ಸಚಿವರು, ದಶಕಗಳಿಂದ ಭಯ ಮತ್ತು ಭಯೋತ್ಪಾದನೆಗೆ ಸಮಾನಾರ್ಥಕವಾಗಿರುವ ನಕ್ಸಲಿಸಂ ಅನ್ನು 2026 ರ ಮಾರ್ಚ್ 31ರೊಳಗೆ ನಿರ್ಮೂಲನೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ. ಹಿಂಸೆ, ಭಯೋತ್ಪಾದನೆ ಮತ್ತು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಸಿದ್ಧಾಂತವನ್ನು ತ್ಯಜಿಸಿ, ಅಭಿವೃದ್ಧಿ ಮತ್ತು ನಂಬಿಕೆಯ ಮುಖ್ಯವಾಹಿನಿಗೆ ಸೇರಲು ಉಳಿದ ನಕ್ಸಲರಿಗೆ ನಾನು ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದು ಸಲಹೆ ನೀಡಿದ್ದಾರೆ.
ಚೈಬಾಸಾದ ಸಾರಂಡಾ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ಜಾರ್ಖಂಡ್ ಪೊಲೀಸರು ತಿಳಿಸಿದ್ದಾರೆ.
