ಉದಯವಾಹಿನಿ, : 2026ರ ಐಸಿಸಿ ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯುವ ಮೂಲಕ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಕ್ರಿಕೆಟ್ ಲೋಕಕ್ಕೆ ಶಾಕ್ ನೀಡಿದೆ. ಭಾರತದಲ್ಲಿ ಭದ್ರತೆಯ ಕೊರತೆಯಿದೆ ಎಂಬ ಕಾರಣ ನೀಡಿ ತಂಡವನ್ನು ಕಳುಹಿಸಲು ಬಾಂಗ್ಲಾ ನಿರಾಕರಿಸಿದೆ. ಈ ಹಠಮಾರಿ ನಿರ್ಧಾರದಿಂದಾಗಿ ಬಾಂಗ್ಲಾದೇಶ ಕ್ರಿಕೆಟ್ ಆರ್ಥಿಕ ಪಾತಾಳಕ್ಕೆ ಕುಸಿಯುವ ಭೀತಿ ಎದುರಾಗಿದೆ.
ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ ಈ ಟೂರ್ನಿಯಲ್ಲಿ, ತನ್ನ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕೋರಿತ್ತು. ಆದರೆ, “ಭಾರತದಲ್ಲಿ ಯಾವುದೇ ಭದ್ರತಾ ಸಮಸ್ಯೆಯಿಲ್ಲ” ಎಂದು ಐಸಿಸಿ ಈ ಮನವಿಯನ್ನು ತಳ್ಳಿಹಾಕಿತ್ತು. “ಬರದಿದ್ದರೆ ಬೇರೆ ತಂಡವನ್ನು ಆರಿಸುತ್ತೇವೆ” ಎಂಬ ಐಸಿಸಿ ಎಚ್ಚರಿಕೆಗೂ ಕ್ಯಾರೆ ಎನ್ನದ ಬಾಂಗ್ಲಾದೇಶ, ಅಂತಿಮವಾಗಿ ಟೂರ್ನಿಯಿಂದಲೇ ಹಿಂದೆ ಸರಿದಿದೆ.
ಈ ನಿರ್ಧಾರದಿಂದ ಬಾಂಗ್ಲಾದೇಶಕ್ಕೆ ಆಗಲಿರುವ ನಷ್ಟ ಅಷ್ಟಿಷ್ಟಲ್ಲ. ವಾರ್ಷಿಕ ಆದಾಯದ ಪಾಲಿನಲ್ಲಿ ಸುಮಾರು 240 ಕೋಟಿ ರೂಪಾಯಿ ನಷ್ಟವಾಗಲಿದೆ. ಪ್ರಸಾರ ಹಕ್ಕು ಮತ್ತು ಪ್ರಾಯೋಜಕತ್ವ ಸೇರಿ ಪ್ರಸಕ್ತ ಸಾಲಿನ ಒಟ್ಟು ಗಳಿಕೆಯಲ್ಲಿ ಶೇ. 60ಕ್ಕೂ ಹೆಚ್ಚು ನಷ್ಟ ಸಂಭವಿಸಬಹುದು. ಪಂದ್ಯದ ಶುಲ್ಕ, ಬೋನಸ್ ಮತ್ತು ಬಹುಮಾನದ ಮೊತ್ತದಿಂದ ಆಟಗಾರರು ವಂಚಿತರಾಗಲಿದ್ದಾರೆ. ಭಾರತ ತಂಡವು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಈಗಿನ ಬೆಳವಣಿಗೆಯಿಂದ ಈ ಸರಣಿ ರದ್ದಾಗುವ ಸಾಧ್ಯತೆ ದಟ್ಟವಾಗಿದೆ. ಇದು ಬಾಂಗ್ಲಾದೇಶಕ್ಕೆ ಮತ್ತಷ್ಟು ಆರ್ಥಿಕ ಹೊಡೆತ ನೀಡಲಿದೆ.
