ಉದಯವಾಹಿನಿ, ಚೆನ್ನೈ: ಜೈಲು ಬೆಂಗಾವಲು ಪಡೆ ಮೇಲೆ ಬಾಂಬ್ ದಾಳಿ ನಡೆಸಿರುವ ಪ್ರಕರಣ ತಮಿಳುನಾಡಿನ ಪೆರಂಬಲೂರು ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ವೆಳ್ಳೈ ಕಾಲಿ ಅಪಾಯದಿಂದ ಪಾರಾಗಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ವೆಳ್ಳೈ ಕಾಲಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮರಳಿ ಚೆನ್ನೈನ ಪುಝಲ್ ಕೇಂದ್ರ ಕಾರಾಗೃಹಕ್ಕೆ ಕರೆತರುತ್ತಿದ್ದಾಗ ಈ ದಾಳಿ ನಡೆದಿದೆ. ವೆಳ್ಳೈ ಕಾಲಿಯನ್ನು ಕೊಳ್ಳುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಒಂಬತ್ತು ಕೊಲೆ ಪ್ರಕರಣ ಸೇರಿದಂತೆ ಸುಮಾರು 30 ಪ್ರಕರಣಗಳಲ್ಲಿ ಭಾಗಿಯಾಗಿರುವ ಮಧುರೈನ ಕುಖ್ಯಾತ ಅಪರಾಧಿ ವೆಳ್ಳೈ ಕಾಲಿಯನ್ನು ಮಾದಕ ದ್ರವ್ಯ ಮತ್ತು ಮನೋವಿಕೃತ ವಸ್ತುಗಳ ಬಳಕೆ ನಿಷೇಧ ಕಾಯ್ದೆಯಡಿಯಲ್ಲಿ ಶಿಕ್ಷೆಗೊಳಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಚೆನ್ನೈನ ಪುಝಲ್ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.
ಜನವರಿ 21ರಂದು ವೆಳ್ಳೈ ಕಾಲಿಯನ್ನು ಪುದುಕ್ಕೊಟ್ಟೈ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಳಿಕ ಆತನನ್ನು ದಿಂಡಿಗಲ್ ಸಬ್-ಜೈಲಿಗೆ ಸ್ಥಳಾಂತರಿಸಲಾಗಿದೆ. ನ್ಯಾಯಾಲಯದಿಂದ ಹಿಂದಿರುಗುತ್ತಿದ್ದ ಜೈಲು ಪೊಲೀಸ್ ಬೆಂಗಾವಲು ಪಡೆ ವಾಹನದಲ್ಲಿದ್ದ ಅಧಿಕಾರಿಗಳು ಕಾಲಿಯೊಂದಿಗೆ ಪೆರಂಬಲೂರ್ ಜಿಲ್ಲೆಯ ಹೊಟೇಲ್ ಬಳಿ ಊಟಕ್ಕೆಂದು ಎರಡು ಎಸ್‌ಯುವಿಗಳಲ್ಲಿ ಬಂದ ತಂಡವೊಂದು ಕಾಲಿಯನ್ನು ಕೊಲ್ಲುವ ಸಲುವಾಗಿ ದೇಶೀಯ ಬಾಂಬ್‌ಗಳನ್ನು ಎಸೆದಿದೆ. ತಕ್ಷಣವೇ ಬೆಂಗಾವಲು ತಂಡದ ಸಬ್-ಇನ್‌ಸ್ಪೆಕ್ಟರ್ ಗುಂಡು ಹಾರಿಸಿದ್ದು, ದಾಳಿಕೋರರು ತಪ್ಪಿಸಿಕೊಂಡರು. ವೆಳ್ಳೈ ಕಾಲಿಗೆ ಯಾವುದೇ ಗಾಯವಾಗಿಲ್ಲ. ಬಾಂಬ್ ದಾಳಿಯ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
