ಉದಯವಾಹಿನಿ, ಇಂದೋರ್ : ಇಂದೋರ್ನ ಭಾಗೀರಥಪುರದಲ್ಲಿ ಕಲುಷಿತ ನೀರಿನ ಘಟನೆ ಬಗ್ಗೆ ತನಿಖೆ ನಡೆಸಲು ಮಾಜಿ ಹೈಕೋರ್ಟ್ ನ್ಯಾಯಾಧೀಶರನ್ನು ಒಳಗೊಂಡ ತನಿಖಾ ಸಮಿತಿಯನ್ನು ಮಧ್ಯಪ್ರದೇಶ ಹೈಕೋರ್ಟ್ ಪೀಠ ರಚಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಪೀಠ, ಈ ಘಟನೆ ಕುರಿತು ತುರ್ತು ನ್ಯಾಯಾಂಗ ಪರಿಶೀಲನೆ ಅಗತ್ಯವಿದೆ ಎಂದಿದ್ದು, ವಿಚಾರಣೆ ಪ್ರಾರಂಭವಾದ ನಾಲ್ಕು ವಾರಗಳ ಬಳಿಕ ಮಧ್ಯಂತರ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಿದೆ.
ಭಾಗೀರಥಪುರದಲ್ಲಿ ಕಲುಷಿತ ನೀರು ಸೇವನೆಯಿಂದ ಹಲವು ಜನರು ಸಾವನ್ನಪ್ಪಿದ ಕುರಿತು ಏಕಕಾಲದಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಗಳನ್ನು ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ಥಿ ಅವರನ್ನೊಳಗೊಂಡ ವಿಭಾಗೀಯ ವಿಚಾರಣೆ ನಡೆಸುತ್ತಿದೆ. ಮಂಗಳವಾರ ಹಗಲು ಪೂರ್ತಿ ಈ ವಿಚಾರಣೆ ಆಲಿಸಿದ ಪೀಠ ತಡರಾತ್ರಿ ಈ ಆದೇಶ ನೀಡಿದೆ. ಭಾಗೀರಥಪುರದಲ್ಲಿ ಉಂಟಾದ ಅತಿಸಾರ ಮತ್ತು ವಾಂತಿಯಿಂದ ಸಂಭವಿಸಿದ ಸಾವಿಗೆ ಕಲುಷಿತ ಕುಡಿಯುವ ನೀರು ಕಾರಣವಾಗಿದೆ ಎಂದು ಕೂಡ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಘಟನೆ ಕುರಿತು ನಗರದ ಸರ್ಕಾರಿ ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನ ಐವರು ತಜ್ಞರ ಸಮಿತಿಯು ಸಿದ್ಧಪಡಿಸಿದ ವರದಿಯಲ್ಲಿ, ಭಾಗೀರಥಪುರದಲ್ಲಿ ನಾಲ್ಕು ಜನರ ಸಾವು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿಲ್ಲ ಎಂದು ತಿಳಿಸಲಾಗಿದೆ. ಆ ಪ್ರದೇಶದಲ್ಲಿ ಇತರ ಮೂರು ಜನರ ಸಾವಿಗೆ ಕಾರಣವೇನೆಂದು ತೀರ್ಮಾನಿಸಲು ಸಾಧ್ಯವಾಗಲಿಲ್ಲ ಎಂದು ಸರ್ಕಾರ ಪೀಠಕ್ಕೆ ತಿಳಿಸಿತು. ಹೈಕೋರ್ಟ್ ಪೀಠವು ವರದಿಯ ಹಿಂದಿನ ವೈಜ್ಞಾನಿಕ ಆಧಾರದ ಕುರಿತು ರಾಜ್ಯ ಸರ್ಕಾರಕ್ಕೆ ಕೇಳಿತು.
ಭಾಗೀರಥಪುರ ಪ್ರದೇಶದಲ್ಲಿ ಕುಡಿಯುವ ನೀರು ಸರಬರಾಜು ಮಾಲಿನ್ಯಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಯು ಮಕ್ಕಳು ಮತ್ತು ವೃದ್ಧರು ಸೇರಿದಂತೆ ನಿವಾಸಿಗಳಿಗೆ ಭೀಕರ ಆರೋಗ್ಯ ಅಪಾಯಗಳನ್ನುಂಟುಮಾಡಿದೆ ಎಂದು ತಿಳಿಸಿದೆ.
ಅರ್ಜಿದಾರರು ಮತ್ತು ಮಾಧ್ಯಮ ವರದಿಗಳ ಪ್ರಕಾರ, ಇಲ್ಲಿಯವರೆಗೆ ಸಾವಿನ ಸಂಖ್ಯೆ ಸುಮಾರು 30 ರಷ್ಟಿದೆ. ಆದರೆ ವರದಿಯಲ್ಲಿ ಯಾವುದೇ ಆಧಾರ ಅಥವಾ ದಾಖಲೆಯಿಲ್ಲದೆ ಕೇವಲ 16 ಜನರನ್ನು ಮಾತ್ರ ತೋರಿಸಲಾಗಿದೆ. ಒಳಚರಂಡಿ ಮಿಶ್ರಣ, ಪೈಪ್‌ಲೈನ್‌ನಲ್ಲಿ ಸೋರಿಕೆ ಮತ್ತು ಕುಡಿಯುವ ನೀರಿನ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿರುವುದು ನೀರಿನಿಂದ ಹರಡುವ ರೋಗಗಳ ಹರಡುವಿಕೆಗೆ ಕಾರಣವಾಗಿದೆ. ಛಾಯಾಚಿತ್ರಗಳು, ವೈದ್ಯಕೀಯ ವರದಿಗಳು ಮತ್ತು ಅಧಿಕಾರಿಗಳಿಗೆ ಸಲ್ಲಿಸಲಾದ ದೂರುಗಳು ಪ್ರಾಥಮಿಕವಾಗಿ ತುರ್ತು ನ್ಯಾಯಾಂಗ ಪರಿಶೀಲನೆಯ ಅಗತ್ಯವಿರುವ ವಿಷಯವನ್ನು ಸೂಚಿಸುತ್ತವೆ ಎಂದು ಹೈಕೋರ್ಟ್ ಹೇಳಿದೆ.
