ಉದಯವಾಹಿನಿ, ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಣಿವೆ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಹಿಮ ಮಳೆ ಸುರಿಯುತ್ತಿದ್ದು, ಪ್ರವಾಸಿಗರ ಪ್ರಮುಖ ಸ್ಥಳವಾಗಿರುವ ಸೋನಾಮಾರ್ಗ್ ಪ್ರವಾಸಿಗರ ರೆಸಾರ್ಟ್ ಮೇಲೆ ಹಿಮಪಾತವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 10.12ಕ್ಕೆ ಈ ದುರಂತ ಸಂಭವಿಸಿದೆ. ಮಧ್ಯ ಕಾಶ್ಮೀರದ ಗಂಡೇರ್ಬಲ್ ಜಿಲ್ಲೆಯ ಸೋನಾಮಾರ್ಗ್ ರೆಸಾರ್ಟ್‌ನ ಮೇಲೆ ಪ್ರವಾಹದ ರೀತಿಯಲ್ಲಿ ಹಿಮದ ರಾಶಿ ಹರಿದು ಬಂದಿದ್ದು, ರೆಸಾರ್ಟ್ ಸಂಪೂರ್ಣವಾಗಿ ಹಿಮಪಾತದಿಂದ ಮುಚ್ಚಿ ಹೋಗಿದೆ. ರೆಸಾರ್ಟ್ ಮತ್ತು ಸುತ್ತಮುತ್ತಲಿನ ಕಟ್ಟಡಗಳು ಹಿಮದಿಂದ ಆವೃತವಾಗಿದೆ. ಈ ಬೃಹತ್ ಹಿಮಪಾತವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಟ್ಟಡಗಳನ್ನು ಹಿಮ ಆವರಿಸಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಭಾರಿ ಹಿಮಪಾತದಲ್ಲಿ ಯಾವುದೇ ಜೀವಹಾನಿ ವರದಿಯಾಗಿಲ್ಲ. ಜಿಲ್ಲೆಯಲ್ಲಿ ಹೆಚ್ಚಿನ ತೀವ್ರತೆಯ ಅಥವಾ ಹೆಚ್ಚಿನ ಅಪಾಯಕಾರಿ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸೋನಾಮಾರ್ಗ್ ಮತ್ತು ಕಣಿವೆಯ ಇತರ ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ ಮಧ್ಯಮದಿಂದ ಭಾರಿ ಹಿಮ ಬೀಳುತ್ತಿದೆ.
ಡೆಹ್ರಾಡೂನ್ನಲ್ಲೂ ಹಿಮಪಾತದ ಎಚ್ಚರಿಕೆ: ರಾಜ್ಯದಲ್ಲೂ ಚಳಿಯ ತೀವ್ರತೆ ಹೆಚ್ಚಿದ್ದು, ಬದರಿನಾಥ್ ಮತ್ತು ಕೇದಾರನಾಥ ಸೇರಿದಂತೆ ಉತ್ತರಾಖಂಡದ ಹಲವಾರು ಎತ್ತರದ ಪ್ರದೇಶಗಳಿಗೆ ಹಿಮಪಾತವಾಗುವ ಸಾಧ್ಯತೆ ಕುರಿತು ಎಚ್ಚರಿಕೆ ನೀಡಲಾಗಿದೆ.
ಒಂದು ವಾರದೊಳಗೆ ರಾಜ್ಯದಲ್ಲಿ ಇದು ಎರಡನೇ ಹಿಮಪಾತವಾಗಿದೆ. ಇದಕ್ಕೂ ಮೊದಲು, ಜನವರಿ 23 ರಂದು ಸಂಭವಿಸಿದ್ದ ಭಾರಿ ಹಿಮಪಾತವು ಎತ್ತರದ ಪ್ರದೇಶಗಳನ್ನು ಆವರಿಸಿತ್ತು. ಹಿಮಪಾತ ಮತ್ತು ಎತ್ತರದ ಪ್ರದೇಶಗಳಲ್ಲಿ ಹಿಮಪಾತದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಎಲ್ಲಾ ಜಿಲ್ಲೆಗಳಿಗೆ ಎಚ್ಚರಿಕೆ ರವಾನಿಸಿದೆ.
ಈ ಕುರಿತು ಚಂಡೀಗಢ ಮೂಲದ ಡಿಫೆನ್ಸ್ ಜಿಯೋ-ಇನ್ಫರ್ಮ್ಯಾಟಿಕ್ಸ್ ರಿಸರ್ಚ್ ಎಸ್ಟಾಬ್ಲಿಷ್‌ಮೆಂಟ್ (ಡಿಜಿಆರ್‌ಇ) ಸೂಚನೆ ಹೊರಡಿಸಿದೆ. ವಿವಿಧ ಎತ್ತರದ ಪ್ರದೇಶಗಳಲ್ಲಿ ಹಿಮಪಾತ ಮತ್ತು ಹಿಮಾವೃತವಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಕಳೆದೆರಡು ದಿನಗಳ ಹಿಂದೆ ಚಮೋಲಿ ಜಿಲ್ಲೆಯ ಬದರಿನಾಥ್ ಮತ್ತು ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ, ಸುತ್ತಮುತ್ತಲಿನ ಶಿಖರಗಳು ಮತ್ತು ಉತ್ತರಕಾಶಿ ಜಿಲ್ಲೆಯ ಎತ್ತರದ ಪ್ರದೇಶಗಳಲ್ಲಿ ಹಿಮಪಾತದ ವರದಿಯಾಗುತ್ತಿದೆ. ಉತ್ತರಕಾಶಿ, ಚಮೋಲಿ ಮತ್ತು ರುದ್ರಪ್ರಯಾಗದಲ್ಲಿ ಅರೆಂಜ್ ಅಲರ್ಟ್ ಘೋಷಿಸಲಾಗಿದೆ.
