ಉದಯವಾಹಿನಿ , ಬೆಂಗಳೂರು : ರಸ್ತೆ ಗುಂಡಿ ವಿಚಾರದಲ್ಲಿ ಸರ್ಕಾರವನ್ನು ಟೀಕಿಸಿದ್ದ ಉದ್ಯಮಿ ಮೋಹನ್‌ದಾಸ್ ಪೈ ಈಗ ರಾಜ್ಯದಲ್ಲಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಟೀಕಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಚಿವರು, ʻಟ್ವೀಟ್ ಮಾಡುವುದನ್ನು ಬಿಟ್ಟು ನೇರವಾಗಿ ನಮ್ಮ ಬಿಎಂಟಿಸಿ ಎಂಡಿ ಜೊತೆ ಮುಖಾಮುಖಿ ಚರ್ಚೆಗೆ ಬನ್ನಿʼ ಎಂದು ಪೈ ಅವರಿಗೆ ಸವಾಲ್ ಹಾಕಿದ್ದಾರೆ.ಅಶ್ವಿನ್ ಮಹೇಶ್ ಎಂಬವರು ಟ್ವೀಟ್ ಮಾಡಿದ್ದ ಪೋಸ್ಟ್ ಉಲ್ಲೇಖಿಸಿ ಮೋಹನ್ ದಾಸ್ ಅವರು ಎಕ್ಸ್‌ನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಗ್ಗೆ ಮತ್ತು ಸಚಿವ ರಾಮಲಿಂಗಾ ರೆಡ್ಡಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಾರಿಗೆ ಸಚಿವರು ಟಾಂಗ್ ಕೊಟ್ಟಿದ್ದಾರೆ.
ರಾಮಲಿಂಗರೆಡ್ಡಿಯವರೇ ಸಾರಿಗೆ ಸಚಿವರಾಗಿ ನಿಮ್ಮ ಸಿದ್ಧಾಂತ ಮತ್ತು ನಡೆಯಿಂದ ರಾಜ್ಯಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ ನೀಡುವಲ್ಲಿ ನೀವು ವಿಫಲರಾಗಿದ್ದೀರಿ. ಸಾರ್ವಜನಿಕ ಸಾರಿಗೆಯ ಕೊರತೆಯಿಂದ ಜನತೆ ಪರದಾಡುತ್ತಿದ್ದಾರೆ. ದಯವಿಟ್ಟು ಖಾಸಗಿ ವಲಯಕ್ಕೆ ಅವಕಾಶ ನೀಡಿ. ಕಳೆದ ಕೆಲವು ವರ್ಷದಿಂದ ಬಸ್‌ಗಳ ವ್ಯವಸ್ಥೆ ಸರಿಯಿಲ್ಲ. ಬಸ್ ಓಡಾಟ ಕಡಿಮೆಯಾಗಿದೆ. ಕೇವಲ ಸರ್ಕಾರಿ ಸಂಸ್ಥೆಗಳೇ ಕೆಲಸ ಮಾಡಬೇಕು ಎಂಬ ನಿಮ್ಮ ಹಠಮಾರಿತನ ಏಕೆ? ಜನರಿಗೆ ಸಾರ್ವಜನಿಕ ಸಾರಿಗೆ ಬೇಕು, ಅದನ್ನು ಯಾರು ಒದಗಿಸುತ್ತಾರೆ?ʼ ಎಂದು ಉದ್ಯಮಿ ಮೋಹನ್ ದಾಸ್ ಪೈ ಅವರು ಪೋಸ್ಟ್ ಮಾಡಿದ್ದರು.
ʼಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಯಾವುದೇ ವೇದಿಕೆಯಲ್ಲಿ ನಿಮ್ಮೊಂದಿಗೆ ಮುಖಾಮುಖಿ ಚರ್ಚೆಗೆ ಸಿದ್ದ. ನಿಮ್ಮ ಜೊತೆಗೆ ಚರ್ಚೆ ಮಾಡಲು ನಮ್ಮ ಬಿಎಂಟಿಸಿ ಎಂಡಿ ಸಾಕು. ದಯಮಾಡಿ ಬಂದು ವಾಸ್ತವಾಂಶಗಳನ್ನು ನೇರವಾಗಿ ಅವರೊಂದಿಗೆ ಚರ್ಚಿಸಿ. ನೀವು ಚರ್ಚೆಗೆ ಬರುತ್ತೀರಾ? ಇಲ್ಲ ಟ್ವೀಟ್ ಮಾಡುತ್ತಲೇ ಇರುತ್ತೀರಾ?ʼ ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ. ನಿಮ್ಮ ದೃಷ್ಟಿಕೋನವು ಕೇವಲ ಪಕ್ಷಪಾತವಲ್ಲ. ಇದು ಮೂಲಭೂತವಾಗಿ ಸಿದ್ಧಾಂತವಾಗಿದೆ. ನೀವು ಸಾರ್ವಜನಿಕ ಸೇವೆಯನ್ನು ಬ್ಯಾಲೆನ್ಸ್ ಶೀಟ್ ಆಧಾರದಲ್ಲಿ ನೋಡುತ್ತೀರಿ. ನಾವು ಸಾರ್ವಜನಿಕ ಸಾರಿಗೆ ಸೇವೆಯಾಗಿ ನೋಡುತ್ತೇವೆ. ಶಕ್ತಿ ಯೋಜನೆ ಮೂಲಕ ಕ್ರಾಂತಿ ಮಾಡಿದ್ದೇವೆʼ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ. ನಾವು ಮಹಿಳೆಯರಿಗೆ 650 ಕೋಟಿ ಉಚಿತ ಬಸ್ ಟಿಕೆಟ್ ನೀಡಿದ್ದೇವೆ. ಶಕ್ತಿ ಯೋಜನೆ ಕೇವಲ ʼಯೋಜನೆʼ ಅಲ್ಲ. ಇದು ಭಾರತದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಆರ್ಥಿಕ ಸಬಲೀಕರಣ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಬದಲು ನೀವು ನೇರ ಚರ್ಚೆಗೆ ಬನ್ನಿ ಎಂದು ಸವಾಲು ಎಸೆದಿದ್ದಾರೆ.
