ಉದಯವಾಹಿನಿ , ಶಿವಮೊಗ್ಗ : ಶ್ರಮಜೀವಿಗಳಿಗೆ ಆಶ್ರಯವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಕೊಡಲಿ ಪೆಟ್ಟು ಹಾಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಿಸಿದರು. ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಯ ಸ್ವರೂಪ ಬದಲಿಸುವ ವೇಳೆ ಒಕ್ಕೂಟದ ವ್ಯವಸ್ಥೆಯಲ್ಲಿ ರಾಜ್ಯಗಳ ಜತೆ ಚರ್ಚೆ ನಡೆಸಬೇಕಿತ್ತು ಎಂದು ಹೇಳಿದರು.

ಸಂವಿಧಾನಬದ್ಧ ಹಕ್ಕನ್ನು ನರೇಗಾದಲ್ಲಿ ನೀಡಲಾಗಿತ್ತು. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮನರೇಗಾ ಯೋಜನೆ ತೆಗೆದು ವಿಬಿ ಜಿ ರಾಮ್ ಜಿ ಯೋಜನೆ ತರಲಾಗಿದೆ. ಉದ್ಯೋಗ ಖಾತ್ರಿಯಲ್ಲಿ ಗ್ರಾಮ ಪಂಚಾಯಿತಿಯವರು ತೆಗೆದುಕೊಳ್ಳುವ ನಿರ್ಣಯಗಳನ್ನು ಇದೀಗ ದೆಹಲಿಯಲ್ಲಿ ನಿರ್ಣಯ ಮಾಡಲಾಗುತ್ತಿದೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು. ‌

ಉದ್ಯೋಗ ಖಾತ್ರಿಯಲ್ಲಿ ಆರು ಕೋಟಿ ಕುಟುಂಬದ ಪರವಾಗಿ ರಾಷ್ಟ್ರ ವ್ಯಾಪಿ ಆಂದೋಲನ, ಪ್ರತಿಭಟನೆ ಮಾಡುತ್ತಿದ್ದೇವೆ. ಹಣ ದುರುಪಯೋಗ ಆಗುತ್ತಿದ್ದರೆ ತಪ್ಪಿಸುವುದಾಗಿ ಹೇಳಿದ್ದು ತುಂಬಾ ಸಂತೋಷ, ಆದರೆ ಹಣ ದುರುಪಯೋಗ ತಿಳಿದುಕೊಳ್ಳಲು 12 ವರ್ಷ ಬೇಕಾಯಿತೇ ಎಂದು ಪ್ರಶ್ನಿಸಿದ ಸಚಿವರು, ಬಿಜಿಪಿಗರಿಗೆ ನಾಚಿಕೆ ಆಗಬೇಕು ಎಂದು ಟೀಕಿಸಿದರು‌.

ಇನ್ನು ಬೆಳಗಾವಿ ಗಡಿ ಭಾಗ ಚೋರ್ಲಾ ಘಾಟ್‌ನಲ್ಲಿ 2000 ರೂ. ನೋಟ್ ಕಂತೆಯ 400 ಕೋಟಿ ಸಿಕ್ಕಿದೆ ಎನ್ನಲಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬೆಳಗಾವಿ ಪೊಲೀಸರು ಚೆನ್ನಾಗಿ ತನಿಖೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ಹಣ ಯಾರದ್ದು ಎಂದು ತಿಳಿಯಬೇಕು, ಗುಜರಾತ್‌ನಿಂದ ಬಂದಿದೆ ಎನ್ನಲಾಗುತ್ತಿದೆ. ಕುಂಬಳಕಾಯಿ ಕಳ್ಳ ಎಂದರೆ ಬಿಜೆಪಿಯವರು ಹೆಗಲು ಮುಟ್ಟಿ ಯಾಕೆ ನೋಡಿಕೊಳ್ಳುತ್ತಾರೆ ಎಂದು ಸಚಿವರು ಪ್ರಶ್ನಿಸಿದರು.‌

Leave a Reply

Your email address will not be published. Required fields are marked *

error: Content is protected !!