
ಉದಯವಾಹಿನಿ ಯಾದಗಿರಿ; ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸುವ ನಿಟ್ಟಿನಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸಿ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಸ್ಪತ್ರೆಗೆ ಇಂದು ಬೆಳಿಗ್ಗೆ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ಎಲ್ಲಾ ವಾರ್ಡ್‌ಗಳು, ಚುಚ್ಚು ಮದ್ದು ಕೊಠಡಿ, ಔಷಧಿ ವಿತರಣಾ ಕೊಠಡಿ, ಅಪರೇಷನ್ ಕೊಠಡಿ ಸೇರಿದಂತೆ ಎಲ್ಲಾ ವಿಭಾಗಳಿಗೂ ಸಂಚರಿಸಿ ಅಸ್ಪತ್ರೆಯ ಬಗ್ಗೆ ಮಾಹಿತಿ ಪಡೆದು, ಒಳ ರೋಗಿಗಳ ಆರೋಗ್ಯ ವಿಚಾರಿಸಿ, ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಕಲೆಹಾಕಿ ವೈದ್ಯಕೀಯ ಸೇವೆಯ ಗುಣಮಟ್ಟದ ಬಗ್ಗೆ ಖುದ್ದು ಪರಿಶೀಲಿಸಿ ಅವರು ಮಾತನಾಡಿದರು. ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿಯವರು ಸರಿಯಾಗಿ ಸ್ಪಂದಿಸಬೇಕು. ಯಾವುದೇ ಕಾರಣಕ್ಕೂ ಔಷಧಿಯ ಕೊರತೆಯಾಗಬಾರದು. ಜವಾಬ್ದಾರಿ ತೆಗೆದುಕೊಂಡು ಯಾವುದೇ ದೂರು ಬಾರದ ರೀತಿಯಲ್ಲಿ ಕಾಳಜಿಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವಾಗ ವೈದ್ಯರು, ಸಿಬ್ಬಂದಿಗಳು ಸಮಯಪಾಲನೆ ಮಾಡಿ ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ರಿಜ್ವಾನ್ ಆಫ್ರೀನ್ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
