ಉದಯವಾಹಿನಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸ್ಥಾಪನೆಯ 100 ವರ್ಷಗಳನ್ನು 2025ರ ವಿಜಯದಶಮಿ ಸಂದರ್ಭದಲ್ಲಿ ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸಂಘವು ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿದ್ದು, ದೇಶದ ವಿವಿಧ ಭಾಗಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅದರ ಭಾಗವಾಗಿ ‘ಸಂಘ ಯಾತ್ರೆ: ಹೊಸ ದಿಗಂತ’ ಎಂಬ ಎರಡು ದಿನಗಳ ವಿಶೇಷ ಕಾರ್ಯಕ್ರಮವು ಮುಂಬೈನಲ್ಲಿ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಹಲವು ದಿಗ್ಗಜರು ಭಾಗವಹಿಸಿರುವುದು ಗಮನ ಸೆಳೆಯುತ್ತಿದೆ.
ಮುಂಬೈನ ಭವ್ಯ ಆಡಿಯಿಟೋರಿಯಂನಲ್ಲಿ ನಡೆಯುತ್ತಿರುವ ಈ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಪ್ರಧಾನ ಭಾಷಣಕಾರರಾಗಿದ್ದು, ಮೋಹನ್ ಭಾಗವತ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿತವಾಗಿದೆ. ಕಾರ್ಯಕ್ರಮದ ಮೊದಲ ದಿನವಾದ ಫೆಬ್ರವರಿ 7ರಂದು ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ರಣಬೀರ್ ಕಪೂರ್ ಕಾರ್ಯಕ್ರಮಕ್ಕೆ ಹಾಜರಾಗಿದ್ದು ಸಾಕಷ್ಟು ಗಮನ ಸೆಳೆದಿತ್ತು. ಕಾರ್ಯಕ್ರಮದಲ್ಲಿ ಆಸೀನರಾಗಿ ಭಾಷಣಗಳನ್ನು ಇಬ್ಬರು ಸೂಪರ್ ಸ್ಟಾರ್ಗಳು ಕೇಳಿದರು. ಅವರ ಜೊತೆಗೆ ನಿರ್ದೇಶಕ ಮೋಹಿತ್ ಸೂರಿ, ಸುಭಾಷ್ ಘೈ, ಮಹಾವೀರ್ ಜೈನ್, ಓಂ ರಾವತ್, ವಿಕ್ರಮ್ ಮಲ್ಹೋತ್ರಾ ಹಾಗೂ ಗೀತಕಾರ ಪ್ರಸೂನ್ ಜೋಶಿ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು.
