ಉದಯವಾಹಿನಿ,  : ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಅಮೆರಿಕ ವಿರುದ್ಧ ಪ್ರಯಾಸದ ಗೆಲುವಿನೊಂದಿಗೆ ಶುಭಾರಂಭ ಮಾಡಿದ ಟೀಮ್‌ ಇಂಡಿಯಾತನ್ನ ದ್ವಿತೀಯ ಪಂದ್ಯವನ್ನು ಫೆ.12 ರಂದು ಆಡಲಿದೆ. ಎದುರಾಳಿ ನಮೀಬಿಯಾ. ಈ ಪಂದ್ಯವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು 4 ದಿನ ಕಾಯಬೇಕು.ಸದ್ಯ ಅಮೆರಿಕ ವಿರುದ್ಧ ಗೆದ್ದಿರುವ ಭಾರತ ಅಗ್ರಸ್ಥಾನದಲ್ಲಿದೆ. ತನ್ನ ಬದ್ಧ ಎದುರಾಳಿ ಪಾಕಿಸ್ತಾನ ಎರಡನೇ ಸ್ಥಾನದಲ್ಲಿದೆ. ಸೂಪರ್‌-8 ಪ್ರವೇಶಕ್ಕೆ ಒಂದು ತಂಡಕ್ಕೆ ಕನಿಷ್ಠ ಮೂರು ಗೆಲುವು ಅತ್ಯಗತ್ಯ. ಹೀಗಾಗಿ ಭಾರತ ಇನ್ನೆರಡು ಪಂದ್ಯ ಗೆದ್ದರೆ ಮುಂದಿನ ಹಂತಕ್ಕೆ ತೇರ್ಗಡೆ ಆಗಲಿದೆ. ಫೆ.15 ರಂದು ಕೊಲಂಬೊದಲ್ಲಿ ನಿಗದಿಯಾಗಿರುವ ಪಂದ್ಯದಲ್ಲಿ ಪಾಕ್‌ ಆಡದಿದ್ದರೆ ಭಾರತಕ್ಕೆ 2 ಅಂಕ ಲಭಿಸಲಿದೆ.

ಭಾರತ ಮತ್ತು ನಮೀಬಿಯಾ ನಡುವಣ ಪಂದ್ಯ ದೆಹಲಿಯ ಅರುಣ್‌ ಜೇಟ್ಲಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯಲಿದೆ. ಬ್ಯಾಟಿಂಗ್‌ ಸ್ನೇಹಿ ಈ ಪಿಚ್‌ನಲ್ಲಿ ದೊಡ್ಡ ಮೊತ್ತ ನಿರೀಕ್ಷಿಸಬಹುದು. ಇಬ್ಬನಿ ಕಾಟ ಇರುವ ಕಾರಣದಿಂದ ಟಾಸ್‌ ಕೂಡ ಮುಖ್ಯ ಪಾತ್ರವಹಿಸಲಿದೆ. ಭಾರತ ಈ ಪಂದ್ಯಕ್ಕೆ ಕೆಲ ಬದಲಾವಣೆ ಮಾಡುವ ಸಾಧ್ಯತೆ ಇದೆ. ಜ್ವರದಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಪ್ರಧಾನ ವೇಗಿ ಜಸ್‌ಪ್ರೀತ್‌ ಬುಮ್ರಾ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಅಧಿಕ. ಅವರಿಗಾಗಿ ಅರ್ಶ್‌ದೀಪ್‌ ಸಿಂಗ್‌ ಜಾಗ ಬಿಡಬೇಕಾಗಬಹುದು. ಏಕೆಂದರೆ ಹರ್ಷಿತ್‌ ರಾಣಾ ಬದಲು ತಂಡ ಸೇರಿರುವ ಮೊಹಮ್ಮದ್‌ ಸಿರಾಜ್‌ ಅಮೆರಿಕ ವಿರುದ್ಧ ಅತ್ಯಮೋಘ ಬೌಲಿಂಗ್‌ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು. ಹೀಗಾಗಿ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಕಡಿಮೆ.

ಪ್ರಾದೇಶಿಕ ಅರ್ಹತಾ ಟೂರ್ನಿಯ ಮೂಲಕ ಆಫ್ರಿಕಾ ಖಂಡದಿಂದ ಟಿ20 ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ನಮೀಬಿಯಾ, ಕ್ರಿಕೆಟ್‌ ಜಗತ್ತಿನಲ್ಲಿ ಅಂಬೆಗಾಲಿಡುತ್ತಿರುವ ದೇಶಗಳಲ್ಲೊಂದು. 2021, 2022 ಹಾಗೂ 2024ರ ಟಿ20 ವಿಶ್ವಕಪ್‌ ಆವೃತ್ತಿಗಳಲ್ಲಿ ಭಾಗವಹಿಸಿದೆ. 2025ರಲ್ಲಿ ನಡೆದ ಐಸಿಸಿ ಆಫ್ರಿಕಾ ಅರ್ಹತಾ ಟೂರ್ನಿಯಲ್ಲಿ ಫೈನಲ್‌ ತಲುಪಿದೆ. 2021ರಲ್ಲಿ ಸೂಪರ್‌ 12ರ ಸುತ್ತಿಗೆ ಪ್ರವೇಶ ಪಡೆದು ಗಮನ ಸೆಳೆದಿದ್ದ ನಮೀಬಿಯಾ, ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ.

Leave a Reply

Your email address will not be published. Required fields are marked *

error: Content is protected !!