ಉದಯವಾಹಿನಿ,ಚೆನ್ನೈ :  ಮೊದಲ ಟಿ20 ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡ ಅಫ್ಘಾನಿಸ್ತಾನ ವಿರುದ್ಧ 5 ವಿಕೆಟ್‌ ಅಂತರದ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಸದ್ಯ ‘ಡಿ’ ಗ್ರೂಪ್‌ನಲ್ಲಿ ಅಗ್ರಸ್ಥಾನ ಪಡೆದಿದೆ. ಸೋಲು ಕಂಡ ಆಫ್ಘಾನ್‌ ಕೊನೆಯ ಸ್ಥಾನಿಯಾಗಿದೆ.
ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಅಫ್ಘಾನಿಸ್ತಾನ, ಗುಲ್ಬದಿನ್ ನೈಬ್(63) ಆಕರ್ಷಕ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 182 ರನ್‌ ಕಲೆಹಾಕಿತು. ಬೃಹತ್‌ ಮೊತ್ತ ಬೆನ್ನಟ್ಟಿದ ನ್ಯೂಜಿಲ್ಯಾಂಡ್‌ 17.5 ಓವರ್‌ಗಳಲ್ಲಿ ಕೇವಲ 5 ವಿಕೆಟ್‌ ನಷ್ಟಕ್ಕೆ 183 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಆಫ್ಘಾನ್‌, 50 ರನ್‌ ಕಲೆಹಾಕುವ ಮುನ್ನವೇ 2 ವಿಕೆಟ್‌ ಕಳೆದುಕೊಂಡಿತು. ರಹಮಾನುಲ್ಲಾ ಗುರ್ಬಾಜ್(27) ಮತ್ತು ಇಬ್ರಾಹಿಂ ಜದ್ರಾನ್(10) ರನ್‌ಗೆ ಆಟ ಮುಗಿಸಿದರು. ಮೂರನೇ ವಿಕೆಟ್‌ಗೆ ಜತೆಯಾದ ಗುಲ್ಬದಿನ್ ನೈಬ್ ಮತ್ತು ಸೆಡಿಕುಲ್ಲಾ ಅಟಲ್ ಉತ್ತಮ ಜತೆಯಾಟ ಸಂಘಟಿಸುವ ಮೂಲಕ ಕಿವೀಸ್‌ ಬೌಲರ್‌ಗಳನ್ನು ಕೆಲ ಕಾಲ ಕಾಡಿದರು.ಉಭಯ ಆಟಗಾರರು ಮೂರನೇ ವಿಕೆಟ್‌ಗೆ 51 ಎಸೆತಗಳಿಂದ 79 ರನ್‌ ಒಟ್ಟುಗೂಡಿಸಿದರು. ಗುಲ್ಬದಿನ್ ನೈಬ್ 4 ಸಿಕ್ಸರ್‌ ಮತ್ತು 3 ಬೌಂಡರಿ ನೆರವಿನಿಂದ 63 ರನ್‌ ಬಾರಿಸಿದರೆ, ಸೆಡಿಕುಲ್ಲಾ 29 ರನ್‌ ಕೊಡುಗೆ ನೀಡಿದರು. ನ್ಯೂಜಿಲ್ಯಾಂಡ್‌ ಪರ ಲ್ಯಾಕಿ ಫರ್ಗುಸನ್‌ 2 ವಿಕೆಟ್‌ ಕಿತ್ತರೂ 40 ರನ್‌ ಬಿಟ್ಟುಕೊಟ್ಟರು.

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್‌ ಫಿನ್‌ ಅಲೆನ್‌(1) ಮತ್ತು ರಚಿನ್‌ ರವೀಂದ್ರ(0) ವಿಕೆಟ್‌ ಕಳೆದುಕೊಂಡು ಆರಂಭದಲ್ಲೇ ಆಘಾತ ಎದುರಿಸಿದರೂ, ಟಿಮ್‌ ಸಿಫರ್ಟ್‌ ಮತ್ತು ಗ್ಲೆನ್‌ ಫಿಲಿಪ್ಸ್‌ ಆಕ್ರಮಣಕಾರಿ ಬ್ಯಾಟಿಂಗ್‌ ನೆರವಿನಿಂದ ಚೇತರಿಕೆ ಕಂಡಿತು. ಉಭಯ ಆಟಗಾರರು ಸೇರಿಕೊಂಡು ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಟಿಮ್‌ ಸಿಫರ್ಟ್‌ 65 ರನ್‌ ಬಾರಿಸಿ ಅರ್ಧಶತಕ ಪೂರೈಸಿದರು. ಆದರೆ ಫಿಲಿಪ್ಸ್‌ 8 ರನ್‌ ಅಂತರದಿಂದ ಅರ್ಧಶತಕ ವಂಚಿತರಾದರು. ಅವರು 25 ಎಸೆತಗಳಿಂದ 42 ರನ್‌ ಗಳಿಸಿದರು. ಅಂತಿಮವಾಗಿ ಡೇರಿಯಲ್‌ ಮಿಚೆಲ್‌(25*) ಮತ್ತು ಮಿಚೆಲ್‌ ಸ್ಯಾಂಟ್ನರ್‌ 17* ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಮುಜೀಬ್ ಉರ್ ರೆಹಮಾನ್ 2 ವಿಕೆಟ್‌ ಪಡೆದರೂ ತಂಡ ಸೋತ ಕಾರಣ ಅವರ ಶ್ರಮ ವ್ಯರ್ಥವಾಯಿತು.

Leave a Reply

Your email address will not be published. Required fields are marked *

error: Content is protected !!