ಉದಯವಾಹಿನಿ, ಕೋಲ್ಕತಾ: ರೊಮ್ಯಾರಿಯೊ ಶೆಫರ್ಡ್‌ ಹ್ಯಾಟ್ರಿಕ್‌ ವಿಕೆಟ್‌ ಹಾಗೂ ಶಿಮ್ರಾನ್‌ ಹೆಟ್ಮಾಯೆರ್‌ ಅವರ ಅರ್ಧಶತಕದ ಬಲದಿಂದ ವೆಸ್ಟ್‌ ಇಂಡೀಸ್‌ ತಂಡ, ಸ್ಲಾಟ್ಲೆಂಡ್‌ ವಿರುದ್ಧ 35 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಶೇಯ್‌ ಹೋಪ್‌ ನಾಯಕತ್ವದ ವಿಂಡೀಸ್‌ ತಂಡ ಶುಭಾರಂಭ ಮಾಡಿತು. ಕೇವಲ 36 ಎಸೆತಗಳಲ್ಲಿ 64 ರನ್‌ಗಳನ್ನು ಗಳಿಸಿದ ಶೀಮ್ರಾನ್‌ ಹೆಟ್ಮಾಯೆರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಟೂರ್ನಿಯ ಎರಡನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿವಂತಾಗಿದ್ದ ವಿಂಡೀಸ್‌, ಶಿಮ್ರಾನ್‌ ಹೆಟ್ಮಾಯೆರ್‌ ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 182 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಸ್ಕಾಟ್ಲೆಂಡ್‌ ತಂಡ, ರಿಚೀ ಬೆರ್ರಿಂಗ್ಟನ್‌ ಹಾಗೂ ಟಾಮ್‌ ಬ್ರೂಸ್‌ ಅವರ ಬ್ಯಾಟಿಂಗ್‌ ಬಲದಿಂದ ಗೆಲುವಿನ ಸನಿಹ ಬಂದಿತ್ತು. ಆದರೂ ರೊಮ್ಯಾರಿಯೊ ಶೆಫರ್ಡ್‌ ಹ್ಯಾಟ್ರಿಕ್‌ ವಿಕೆಟ್‌ಗೆ ನಲುಗಿ 35 ರನ್‌ಗಳಿಂದ ಸೋಲು ಒಪ್ಪಿಕೊಂಡಿತು.

183 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಸ್ಕಾಟ್ಲೆಂಡ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಬಹುಬೇಗ ಔಟ್‌ ಆದರು. ಆ ಮೂಲಕ ಸ್ಕಾಟ್ಲೆಂಡ್‌ ತಂಡ ಕೇವಲ 37 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ನಾಲ್ಕನೇ ವಿಕೆಟ್‌ಗೆ ಜೊತೆಯಾದ ರಿಚೀ ಬೆರ್ರಿಂಗ್ಟನ್‌ ಹಾಗೂ ಟಾಮ್‌ ಬ್ರೂಸ್‌ 78 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡುವ ಮೂಲಕ ತಂಡದ ಮೊತ್ತವನ್ನು 115 ರ ಗಡಿಗೆ ತಲುಪಿಸಿದರು. ಅತ್ಯುತ್ತಮ ಬ್ಯಾಟ್‌ ಮಾಡಿದ ರಿಚೀ ಬೆರ್ರಿಂಗ್ಟನ್‌ 24 ಎಸೆತಗಳಲ್ಲಿ 42 ರನ್‌ಗಳು ಹಾಗೂ ಟಾಮ್‌ ಬ್ರೂಸ್‌ 28 ಎಸೆತಗಳಲ್ಲಿ 35 ರನ್‌ಗಳನ್ನು ಗಳಿಸಿ ತಮ್ಮ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಈ ಇಬ್ಬರನ್ನೂ ಕ್ರಮವಾಗಿ ಜೇಸನ್‌ ಹೋಲ್ಡರ್‌ ಹಾಗೂ ಗುಡಕೇಶ್‌ ಮೋಟಿ ಔಟ್‌ ಮಾಡಿ ವಿಂಡೀಸ್‌ನ ಕಮ್‌ಬ್ಯಾಕ್‌ಗೆ ನೆರವು ನೀಡಿದರು.

Leave a Reply

Your email address will not be published. Required fields are marked *

error: Content is protected !!