ಉದಯವಾಹಿನಿ: ಮುಂಬರುವ ಇಂಡಿಯನ್ ಸೂಪರ್ ಲೀಗ್ (ISL) ಅಭಿಯಾನಕ್ಕೆ ಬೆಂಗಳೂರು ಎಫ್‌ಸಿ ಸಂಪೂರ್ಣ ಸಿದ್ಧವಾಗಿದೆ. ಇಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ‘ಸೀಸನ್ ಓಪನರ್’ ಪತ್ರಿಕಾಗೋಷ್ಠಿಯಲ್ಲಿ ತಂಡದ ತಂತ್ರಗಾರಿಕೆ ಮತ್ತು ಗುರಿಗಳನ್ನು ಅನಾವರಣಗೊಳಿಸಲಾಯಿತು. ಫೆಬ್ರವರಿ 15ರಂದು ತವರು ಮೈದಾನದಲ್ಲಿ ನಡೆಯಲಿರುವ ಸ್ಪೋರ್ಟಿಂಗ್ ಕ್ಲಬ್ ದೆಹಲಿ ವಿರುದ್ಧದ ಪಂದ್ಯದೊಂದಿಗೆ ಬಿಎಫ್‌ಸಿ ತನ್ನ ಪಯಣ ಆರಂಭಿಸಲಿದೆ.
ತಂಡದ ಸಾರಥ್ಯ ವಹಿಸಿರುವ ಮುಖ್ಯ ಕೋಚ್ ರೆನೆಡಿ ಸಿಂಗ್, ಈ ಬಾರಿ ತಂಡವು ಕೇವಲ ಆಕ್ರಮಣಕ್ಕೆ ಮಾತ್ರವಲ್ಲದೆ ರಕ್ಷಣಾತ್ಮಕ ಬಲಕ್ಕೂ ಆದ್ಯತೆ ನೀಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
“ನಾವು ಆಕ್ರಮಣಕಾರಿಯಾಗಿ ಆಡುತ್ತೇವೆ, ಆದರೆ ರಕ್ಷಣಾ ವಿಭಾಗದಲ್ಲೂ ಒಂದು ಭದ್ರಕೋಟೆಯಾಗಿ ನಿಲ್ಲುತ್ತೇವೆ” ಎಂದು ಕೋಚ್ ತಿಳಿಸಿದ್ದಾರೆ.
ಇದು ಕೇವಲ 13 ಪಂದ್ಯಗಳ ಸಣ್ಣ ಸೀಸನ್ ಆಗಿರುವುದರಿಂದ, ಪ್ರತಿ ಪಂದ್ಯವನ್ನೂ ಫೈನಲ್‌ನಂತೆ ಪರಿಗಣಿಸಿ ಆಡುವುದಾಗಿ ಅವರು ಸಾರಿದ್ದಾರೆ.
ಫಾರ್ವಡ್್ರ ಆಟಗಾರ ರಯಾನ್ ವಿಲಿಯಮ್ಸ್, ತವರು ಅಭಿಮಾನಿಗಳ ಮುಂದೆ ಆಡಲು ತುದಿಗಾಲಿನಲ್ಲಿ ನಿಂತಿರುವುದಾಗಿ ತಿಳಿಸಿದ್ದಾರೆ. ತಂಡದ ಆಟಗಾರರ ನಡುವಿನ ಉತ್ತಮ ಬಾಂಧವ್ಯ ಮತ್ತು ಆತ್ಮವಿಶ್ವಾಸ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಗಲಿದೆ ಎಂಬುದು ಅವರ ನಂಬಿಕೆ.
