ಉದಯವಾಹಿನಿ, ಪ್ರಸಕ್ತ 2026ರ ಟಿ20 ವಿಶ್ವಕಪ್ ಪಂದ್ಯಾವಳಿಯು ಅನಿರೀಕ್ಷಿತ ತಿರುವುಗಳಿಗೆ ಸಾಕ್ಷಿಯಾಗುತ್ತಿದ್ದು ಕ್ರಿಕೆಟ್ ಲೋಕದ ಬಲಿಷ್ಠ ತಂಡಗಳಿಗೆ ಸಣ್ಣ ತಂಡಗಳು ಸಿಂಹಸ್ವಪ್ನವಾಗಿ ಕಾಡುತ್ತಿವೆ. ಬಲಿಷ್ಠ ಆಸ್ಟ್ರೇಲಿಯಾ ತಂಡ ಜಿಂಬಾಬೈ ಎದುರು ಮಣಿದ ಬೆನ್ನಲ್ಲೇ, ಇಂಗ್ಲೆಂಡ್ ತಂಡ ಕೂಡ ಅಲ್ಪದರಲ್ಲೇ ಸೋಲಿನಿಂದ ಪಾರಾಗಿ ಮರ್ಯಾದೆ ಉಳಿಸಿಕೊಂಡಿದೆ.
ಶನಿವಾರ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ನಿರ್ಣಾಯಕ ಹಣಾಹಣಿಯಲ್ಲಿ ಸ್ಕಾಟ್ಲಂಡ್ ನೀಡಿದ ಪ್ರಬಲ ಪೈಪೋಟಿಯನ್ನು ಮೆಟ್ಟಿ ನಿಂತ ಹ್ಯಾರಿ ಬ್ರೂಕ್ ನೇತೃತ್ವದ ಇಂಗ್ಲೆಂಡ್, 5 ವಿಕೆಟ್‌ಗಳ ರೋಚಕ ಜಯ ದಾಖಲಿಸಿ ಸೂಪ‌ರ್-8 ರೇಸ್‌ನಲ್ಲಿ ಜೀವಂತವಾಗಿ ಉಳಿದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲಂಡ್, ಆರಂಭದಲ್ಲಿ ಜೋಪ್ರಾ ಆರ್ಚರ್ ಮತ್ತು ಆದಿಲ್ ರಶೀದ್ ಅವರ ಮಾರಕ ದಾಳಿಗೆ ಸಿಲುಕಿದರೂ ಎದೆಗುಂದಲಿಲ್ಲ. ನಾಯಕ ರಿಚಿ ಬೆರಿಂಗ್ಟನ್ ಮತ್ತು ಮೈಕೆಲ್ ಜೋನ್ಸ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ತಂಡ 152 ರನ್‌ಗಳ ಗೌರವಯುತ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು.
153 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ಗೆ ಸ್ಕಾಟಿಷ್ ಬೌಲರ್‌ಗಳು ಆರಂಭದಲ್ಲೇ ಶಾಕ್ ನೀಡಿದರು. ಕೇವಲ 13 ರನ್‌ಗಳಿಗೆ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದರು. ನಾಯಕ ಹ್ಯಾರಿ ಬ್ರೂಕ್ ಕೂಡ ಕೇವಲ 4 ರನ್‌ಗೆ ಔಟಾದಾಗ ಇಂಗ್ಲೆಂಡ್ ಪಾಳಯದಲ್ಲಿ ಆತಂಕ ಮನೆಮಾಡಿತ್ತು. ಒಂದು ಹಂತದಲ್ಲಿ 86 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸೋಲಿನ ದಡದಲ್ಲಿದ್ದ ತಂಡಕ್ಕೆ ಟಾಮ್ ಬ್ಯಾಂಟನ್ (ಅಜೇಯ 63) ಸಂಜೀವಿನಿಯಾದರು. ಜಾಕೋಬ್ ಬೆಥೆಲ್ ಅವರೊಂದಿಗೆ 66 ರನ್‌ಗಳ ಮಹತ್ವದ ಜೊತೆಯಾಟವಾಡಿದ ಬ್ಯಾಂಟನ್, ಕೊನೆಯಲ್ಲಿ ಸ್ಯಾಮ್ ಕರನ್ ಸಹಕಾರದೊಂದಿಗೆ 19ನೇ ಓವರ್‌ನಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ಗ್ರೂಪ್ ‘ಸಿ’ ಪಟ್ಟಿಯಲ್ಲಿ 4 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದಿದೆ. ಆದರೆ ಇಂಗ್ಲೆಂಡ್‌ನ ಹಾದಿ ಇನ್ನೂ ಸುಗಮವಾಗಿಲ್ಲ. ತನ್ನ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಇಟಲಿಯನ್ನು ಎದುರಿಸಲಿದೆ. ಈ ಪಂದ್ಯಗೆದ್ದರೆ ಮಾತ್ರ ಅಧಿಕೃತವಾಗಿ ಮುಂದಿನ ಹಂತಕ್ಕೆ ಏರಲಿದೆ.
ಒಂದು ವೇಳೆ ಇಂಗ್ಲೆಂಡ್ ಇಟಲಿ ವಿರುದ್ಧ ಸೋತರೆ ಮತ್ತು ಇಟಲಿ ತನ್ನ ಉಳಿದ ಪಂದ್ಯಗಳನ್ನು ಗೆದ್ದರೆ, ಇಂಗ್ಲೆಂಡ್ ಟೂರ್ನಿಯಿಂದ ಹೊರಬೀಳಲಿದೆ. ಇಟಲಿ ಐತಿಹಾಸಿಕವಾಗಿ ಸೂಪರ್-8 ಹಂತಕ್ಕೆ ಲಗ್ಗೆ ಇಡಲಿದೆ.
ಸದ್ಯದ ಮಟ್ಟಿಗೆ ದುರ್ಬಲ ತಂಡಗಳ ಅಬ್ಬರ ನೋಡಿ ಬಲಿಷ್ಠ ತಂಡಗಳು ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡುವಂತಾಗಿದೆ.

Leave a Reply

Your email address will not be published. Required fields are marked *

error: Content is protected !!