ಉದಯವಾಹಿನಿ, ಚೆನ್ನೈ : ಕೆನಡಾದ 19 ವರ್ಷದ ಬ್ಯಾಟಿಂಗ್ ಸೆನ್ಸೇಶನ್ ಯುವರಾಜ್ ಸಮ್ರಾ 2026 ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಿರ್ಭೀತ ಬ್ಯಾಟಿಂಗ್ ನಡೆಸಿ ಶತಕ ಬಾರಿಸುವ ಮೂಲ ಹಲವು ದಾಖಲೆ ಬರೆದಿದ್ದಾರೆ. ಅವರ ಈ ಶತಕದ ಹೊರತಾಗಿಯೂ ತಂಡ 8 ವಿಕೆಟ್ ಅಂತರದ ಸೋಲು ಕಂಡಿತು. ಗೆಲುವು ಸಾಧಿಸಿದ ನ್ಯೂಜಿಲ್ಯಾಂಡ್ ‘ಡಿ’ ಗುಂಪಿನಿಂದ 2ನೇ ತಂಡವಾಗಿ ಸೂಪರ್-8ಗೆ ಲಗ್ಗೆಯಿಟ್ಟಿತು.
ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆನಡಾ ತಂಡ 4 ವಿಕೆಟ್‌ಗೆ 174ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಆದರೆ ನ್ಯೂಜಿಲ್ಯಾಂಡ್ ತಂಡ ಇದನ್ನೂ ಕೇವಲ 15.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 176 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಚೇಸಿಂಗ್ ವೇಳೆ ರಚಿನ್ ರವಿಂದ್ರ ಮತ್ತು ಗ್ಲೆನ್ ಫಿಲಿಪ್ಸ್ ಅಜೇಯ ಅರ್ಧಶತ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ರಚಿನ್ 39 ಎಸೆತಗಳಿಂದ 3 ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ 59 ರನ್ ಬಾರಿಸಿದರೆ, ಸೊಗಸಾದ 6 ಸಿಕ್ಸರ್ ಮತ್ತು 4 ಬೌಂಡರಿ ಸಿಡಿಸಿದ ಫಿಲಿಪ್ಸ್ 76 ರನ್ ಗಳಿಸಿದರು. ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಕೆನಡಾ ಪರ ಯುವರಾಜ್ ಸಮ್ರಾ 65 ಎಸೆತಗಳಲ್ಲಿ 110 ರನ್ ಬಾರಿಸಿ ಚೊಚ್ಚಲ ಶತಕ ಬಾರಿಸಿ ಸಂಭ್ರಮಿಸಿದರು. ಇದು T20 ವಿಶ್ವಕಪ್ ಇತಿಹಾಸದಲ್ಲಿ ಕೆನಡಾದ ಆಟಗಾರನಿಂದ ದಾಖಲಾದ ಮೊದಲ ಶತಕವೂ ಆಗಿದೆ. ಅವರ ಈ ಸೊಗಸಾದ ಶತಕದ ಬ್ಯಾಟಿಂಗ್ ವೇಳೆ 6 ಸಿಕ್ಸರ್ 11 ಬೌಂಡರಿ ದಾಖಲಾಯಿತು.
