ಉದಯವಾಹಿನಿ, ನವದೆಹಲಿ: ಟಿ20ಐ ಪಂದ್ಯಗಳಲ್ಲಿ ತಿಲಕ್ ವರ್ಮಾ ‘ವಿರಾಟ್ ಕೊಹ್ಲಿ ಪಾತ್ರ’ವನ್ನು ನಿರ್ವಹಿಸಬೇಕು ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಕೈಫ್ ಸಲಹೆ ನೀಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ 2026ರ ಟಿ20 ವಿಶ್ವಕಪ್  ಟೂರ್ನಿಯಲ್ಲಿ ತಿಲಕ್ ವರ್ಮಾ ಫಾರ್ಮ್‌ ಕಂಡುಕೊಳ್ಳಲು ನಿರಂತರವಾಗಿ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೈಫ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಸಿಸಿ ಟೂರ್ನಿಯಲ್ಲಿ ತಿಲಕ್ ವರ್ಮಾ ಹೆಚ್ಚು ಆಂಕರ್ ಪಾತ್ರವನ್ನು ವಹಿಸಿಕೊಂಡಿದ್ದು, ಐದು ಪಂದ್ಯಗಳಲ್ಲಿ 118 ಸ್ಟ್ರೈಕ್ ರೇಟ್‌ನೊಂದಿಗೆ 107 ರನ್ ಗಳಿಸಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಸೂಪರ್ 8 ಹಂತದ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಲು ಪ್ರಯತ್ನಿಸಿದ ಬಳಿಕ ಅವರು ವಿಫಲರಾಗಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತಿಲಕ್ ವರ್ಮಾ ಮಾರ್ಕೊ ಯೆನ್ಸೆನ್ ಎಸೆತದಲ್ಲಿ ದೊಡ್ಡ ಶಾಟ್ ಆಡಲು ಪ್ರಯತ್ನಿಸಿ, ಕ್ವಿಂಟನ್ ಡಿ ಕಾಕ್ ಕೈಗೆ ಕ್ಯಾಚ್ ಕೊಟ್ಟು ಔಟಾದರು. ಇದರ ಬೆನ್ನಲ್ಲೆ ಅವರ ಆಟದ ಶೈಲಿಯನ್ನು ಸುನೀಲ್ ಗವಾಸ್ಕರ್ ಟೀಕಿಸಿದ್ದರು. ಅದೇ ಅಭಿಪ್ರಾಯವನ್ನು ಮೊಹಮ್ಮದ್ ಕೈಫ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರತಿಧ್ವನಿಸಿದರು. ತಂಡದ ನಿರ್ವಹಣಾ ಸಮಿತಿ ತಿಲಕ್ ವರ್ಮಾಗೆ ತಮ್ಮ ಮೂಲ ಪಾತ್ರವಾದ ಆಂಕರ್ ಜವಾಬ್ದಾರಿಯನ್ನು ಮುಂದುವರಿಸಲು ಸ್ಪಷ್ಟ ಸೂಚನೆ ನೀಡಬೇಕು ಎಂದು ಕೈಫ್ ಹೇಳಿದರು.

ತಿಲಕ್ ವರ್ಮಾಗೆ ತಮ್ಮದೇ ಆದ ಆಟದ ಶೈಲಿ ಇದೆ. ಅವರು ಕಡಿಮೆ ಸ್ಟ್ರೈಕ್ ರೇಟ್‌ನಲ್ಲೂ ಆಡಲು ಸಾಮರ್ಥ್ಯ ಹೊಂದಿದ್ದಾರೆ. ಆದರೆ ಅವರು ದೊಡ್ಡ ಶಾಟ್ ಹೊಡೆಯಲು ಪ್ರಯತ್ನಿಸುವಾಗ ಔಟಾದರು. ಸ್ಟ್ರೈಕ್ ರೇಟ್ ಬಗ್ಗೆ ಒತ್ತಡ ಅವರ ಮೇಲೆ ನಿರ್ಮಾಣವಾಗಿತ್ತು. ಆಟಗಾರನಾಗಿ ಹೊರಗೆ ಏನು ಮಾತನಾಡಲಾಗುತ್ತಿದೆ ಎಂಬುದನ್ನು ನೀವು ಗಮನಿಸುತ್ತೀರಿ. ಆದರೆ ಆಟಗಾರನು ತನ್ನ ಪಾತ್ರಕ್ಕೆ ಬದ್ಧವಾಗಿರಲು ಹೇಳುವುದು ನಿರ್ವಹಣೆಯ ಕೆಲಸ. ಅವರು ವಿರಾಟ್ ಕೊಹ್ಲಿ ಪಾತ್ರವನ್ನು ನಿರ್ವಹಿಸಬೇಕು. ಕ್ರೀಸ್‌ನಿಂದ ಮುಂದೆ ಬಂದು ದೊಡ್ಡ ಶಾಟ್‌ಗೆ ಹೋಗುವ ಮೂಲಕ ತಮ್ಮ ಆಟದ ಯೋಜನೆಯಿಂದ ದೂರ ಸರಿದರು. ಇತರರು ಏನು ಹೇಳುತ್ತಾರೆ ಎಂಬುದನ್ನು ಕೇಳುತ್ತಾ ಇದ್ದರೆ ನೀವು ನಿಮ್ಮ ಆಟವನ್ನು ಆಡಲು ಸಾಧ್ಯವಿಲ್ಲ,” ಎಂದು ಕೈಫ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!