ಉದಯವಾಹಿನಿ, ಹುಬ್ಬಳ್ಳಿ: ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್ ಪಂದ್ಯ ನಡೆಯುತ್ತಿದೆ. ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ತಂಡಗಳ ನಡುವಿನ ಅಂತಿಮ ಪಂದ್ಯದ ಐತಿಹಾಸಿಕ ಕ್ಷಣಕ್ಕೆ ವಾಣಿಜ್ಯ ನಗರಿ ಸಾಕ್ಷಿಯಾಗಲಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕೆವಲ ಹುಬ್ಬಳ್ಳಿ ಮಾತ್ರವಲ್ಲದೇ ಉತ್ತರ ಕರ್ನಾಟಕ ಜನತೆ ಕಾತುರದಿಂದ ಕಾಯುತ್ತಿದೆ.
ಭಾರತೀಯ ಕ್ರಿಕೆಟ್‌ನ ಪ್ರತಿಷ್ಠಿತ ರಣಜಿ ಟ್ರೋಫಿ ಟೆಸ್ಟ್ ಟೂರ್ನಮೆಂಟ್ ಫೈನಲ್ ಹಂತ ತಲುಪಿದ್ದು, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಜಮ್ಮು ಕಾಶ್ಮೀರ ಫೈನಲ್ ಎಂಟ್ರಿಯಾಗಿದೆ. ಇತ್ತ 11 ವರ್ಷಗಳ ಬಳಿಕ ಕರ್ನಾಟಕ ಫೈನಲ್ ತಲುಪಿದೆ. ಈ ಎರಡು ತಂಡಗಳ ಜಿದ್ದಾಜಿದ್ದಿ ನೋಡಲು ರಾಜ್ಯದ ಮಾತ್ರವಲ್ಲದೇ ದೇಶವೇ ಕಾತುರದಿಂದ ಕಾಯುತ್ತಿದೆ. ಇದೇ ಮೊದಲ ಬಾರಿ ವಾಣಿಜ್ಯ ನಗರಿ ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನಲ್ಲಿ ಫೈನಲ್ ಪಂದ್ಯ ಆಯೋಜನೆ ಮಾಡಿದ್ದು, ಈ ಐತಿಹಾಸಿಕ ಕ್ರಿಕೆಟ್ ಪಂದ್ಯಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ ಬೆಳಗ್ಗೆ 9:30 ರಿಂದ ಪಂದ್ಯ ಶುರುವಾಗಲಿದೆ.
ದೇವದತ್ ಪಡಿಕಲ್ ನಾಯಕತ್ವದ ಕರ್ನಾಟಕ ತಂಡದಲ್ಲಿ ಟೀಂ ಇಂಡಿಯಾದ ಅನುಭವಿ ಆಟಗಾರ ಕೆ.ಎಲ್ ರಾಹುಲ್ , ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಆರ್.ಸ್ಮರಣ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ, ವಿದ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ್, ಪ್ರಸಿದ್ದ್ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಶ್ರೀಜಿತ್ ಕೆ.ಎಲ್, ವೈಶಾಖ್ ವಿಜಯ್‌ಕುಮಾರ್ ಕಣಕ್ಕಿಳಿಯಲಿದ್ದಾರೆ. ನಾವು ಈ ಬಾರಿ ಕಪ್ ಎತ್ತಲಿದ್ದೇವೆ. ಹುಬ್ಬಳ್ಳಿಯಲ್ಲಿ ಈಗಾಗಲೇ ಆಡಿರುವ ಅನುಭವವಿದೆ. ಪಿಚ್ ಬಗ್ಗೆ ಸಾಕಷ್ಟು ವರ್ಕ್ ಮಾಡಿದ್ದೇವೆ ಹುಬ್ಬಳ್ಳಿಯಂತ ನಗರದಲ್ಲಿ ರಣಜಿ ಫೈನಲ್ ಆಡುತ್ತಿರುವುದು ಖುಷಿಯಿದೆ ಅಂತ ಕರ್ನಾಟಕ ತಂಡ ನಾಯಕ ದೇವದತ್ ಪಡಿಕಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
