ಉದಯವಾಹಿನಿ: ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ ತಂಡ ಎರಡನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 527 ರನ್ ಕಲೆಹಾಕಿದೆ. ಆದಾಗ್ಯೂ ಮಂದ ಬೆಳಕಿನಿಂದಾಗಿ ಎರಡನೇ ದಿನದಾಟವನ್ನು ಬೇಗನೇ ಅಂತ್ಯಗೊಳಿಸಲಾಯಿತು. ಆಟವನ್ನು ನಿಲ್ಲಿಸಿದಾಗ ಜೆಕೆ ತಂಡದ ಪರ ಸಾಹಿಲ್ ಲೋತ್ರಾ ಅಜೇಯ 57 ರನ್ ಬಾರಿಸಿದರೆ, ಅಬಿದ್ ಮುಷ್ತಾಕ್ 20 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ. ಮೊದಲ ದಿನದಂತೆ ಎರಡನೇ ದಿನವೂ ಕರ್ನಾಟಕ ಬೌಲರ್ಗಳು ವಿಕೆಟ್ಗಾಗಿ ಪರದಾಡಬೇಕಾಯಿತು. ಇತ್ತ ಜೆಕೆ ತಂಡದ ಪರ ಇದುವರೆಗೆ 1 ಶತಕ ಹಾಗೂ 5 ಅರ್ಧಶತಕಗಳು ಸಿಡಿದಿದ್ದು ಪಂದ್ಯದ ಮೇಲೆ ಬಿಗಿ ಹಿಡಿದ ಸಾಧಿಸಿದೆ.
ಜೆಕೆ ತಂಡದ ಬ್ಯಾಟಿಂಗ್ ಪಾರುಪತ್ಯ: ಮೊದಲ ದಿನದಾಟದಂತ್ಯಕ್ಕೆ ಕೇವಲ 2 ವಿಕೆಟ್ ಕಳೆದುಕೊಂಡು 284 ರನ್ ಕಲೆಹಾಕಿದ್ದ ಜೆಕೆ ತಂಡ ಇಲ್ಲಿಂದ ತನ್ನ ಎರಡನೇ ದಿನದಾಟವನ್ನು ಮುಂದುವರೆಸಿತು. ಮೊದಲ ದಿನದಾಟದಲ್ಲಿ 117 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಶುಭಂ ಪುಂಡೀರ್ ಹಾಗೂ 52 ರನ್ ಗಳಿಸಿ ಅಜೇಯರಾಗಿದ್ದ ಅಬ್ದುಲ್ ಸಮದ್ ಇನ್ನಿಂಗ್ಸ್ ಮುಗಿಸಿದರು. ಆದಾಗ್ಯೂ ಈ ಜೋಡಿಯ ಜೊತೆಯಾಟ 303 ರನ್ಗಳಿಗೆ ಅಂತ್ಯವಾಯಿತು. ಶತಕ ಬಾರಿಸಿದ್ದ ಶುಭಂ ಪುಂಡೀರ್ ತಮ್ಮ ಖಾತೆಗೆ 4 ರನ್ ಸೇರಿಸಿ 121 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಅಬ್ದುಲ್ ಸಮದ್ ಇನ್ನಿಂಗ್ಸ್ 61 ರನ್ಗಳಿಗೆ ಅಂತ್ಯವಾಯಿತು.
ಐವರ ಅರ್ಧಶತಕ: ಮೊದಲ ದಿನದಾಟದಂದು ಗಾಯದಿಂದಾಗಿ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿದ್ದ ನಾಯಕ ಪರಾಸ್ ಡೋಗ್ರಾ ಎರಡನೇ ದಿನದಂದು ಬ್ಯಾಟಿಂಗ್ಗೆ ಇಳಿದು 70 ರನ್ಗಳ ಇನ್ನಿಂಗ್ಸ್ ಆಡಿದರು. ಕನ್ಹಯ್ಯಾ ವಾಧವನ್ ಕೂಡ 70 ರನ್ಗಳ ಕಾಣಿಕೆ ನೀಡಿದರು. ಇವರಿಬ್ಬರ ಆಟದಿಂದಾಗಿ ತಂಡ 400 ರನ್ಗಳ ಗಡಿ ದಾಟಿತು. ಆ ಬಳಿಕ ಬಂದ ಸಾಹಿಲ್ ಲೋತ್ರಾ ಅಜೇಯ ಅರ್ಧಶತಕ ಬಾರಿಸಿ ತಂಡವನ್ನು 500 ರನ್ಗಳ ಗಡಿ ದಾಟಿಸಿದ್ದಾರೆ.
