ಉದಯವಾಹಿನಿ: ಟೀಂ ಇಂಡಿಯಾದ ಸ್ಟಾರ್ ಓಪನರ್ ಅಭಿಷೇಕ್ ಶರ್ಮಾಗೆ 2026 ರ ಟಿ20 ವಿಶ್ವಕಪ್ ದುಃಸ್ವಪ್ನಕ್ಕಿಂತ ಕಡಿಮೆ ಇಲ್ಲ. ಏಕೆಂದರೆ ಆಡಿರುವ 4 ಪಂದ್ಯಗಳಲ್ಲಿ ಅಭಿಷೇಕ್ ಖಾತೆ ತೆರೆದಿರುವುದು ಏಕೈಕ ಪಂದ್ಯದಲ್ಲಿ ಮಾತ್ರ. ಅಂದರೆ ಉಳಿದಿರುವ ಮೂರು ಪಂದ್ಯಗಳಲ್ಲಿ ಅಭಿಷೇಕ್ ಸೊನ್ನೆ ಸುತ್ತಿದ್ದಾರೆ. ಆದಾಗ್ಯೂ ಐಸಿಸಿ ಟಿ20 ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ನಲ್ಲಿ ಅಭಿಷೇಕ್ ಸ್ಥಾನಕ್ಕೆ ಯಾವುದೇ ಕುತ್ತು ಬಂದಿಲ್ಲ.
ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಭರ್ಜರಿ ಫಾರ್ಮ್ನಲ್ಲಿದ್ದ ಅಭಿಷೇಕ್ ಐಸಿಸಿ ಟಿ20 ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿದ್ದರು. ಇದೀಗ ಟಿ20 ವಿಶ್ವಕಪ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನದ ಹೊರತಾಗಿಯೂ ಅಭಿಷೇಕ್ ನಂಬರ್ 1 ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ. ಅವರ ಜೊತೆಗೆ ಇಶಾನ್ ಕಿಶನ್ ಮತ್ತು ಜಸ್ಪ್ರಿತ್ ಬುಮ್ರಾ ಕೂಡ ತಮ್ಮ ಅತ್ಯುತ್ತಮ ಪ್ರದರ್ಶನಕ್ಕಾಗಿ ಬಹುಮಾನ ಪಡೆದಿದ್ದಾರೆ. ಫೆ.25ರ ಬುಧವಾರದಂದು ಐಸಿಸಿ ಇತ್ತೀಚಿನ ಟಿ20 ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ಆರಂಭಿಕ ಅಭಿಷೇಕ್ ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ 15 ರನ್ ಗಳಿಸಿದ್ದರೂ ತಮ್ಮ ನಂಬರ್ 1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದಾಗ್ಯೂ ಅಭಿಷೇಕ್ ಅವರ ರೇಟಿಂಗ್ ಪಾಯಿಂಟ್ 877ಕ್ಕೆ ಕುಸಿದಿದೆ.
ಎರಡನೇ ಸ್ಥಾನದಲ್ಲಿರುವ ಫಿಲ್ ಸಾಲ್ಟ್ 815 ರೇಟಿಂಗ್ ಪಾಯಿಂಟ್ ಹೊಂದಿರುವುದರಿಂದ ಕೆಲವು ದಿನಗಳವರೆಗೆ ಅಭಿಷೇಕ್ ನಂಬರ್ 1 ಸ್ಥಾನಕ್ಕೆ ಯಾವುದೇ ತೊಂದರೆ ಇಲ್ಲ. ಇನ್ನು ವಿಶ್ವಕಪ್ನಲ್ಲಿ ಪಾಕಿಸ್ತಾನದ ಪರ ಅಮೋಘ ಪ್ರದರ್ಶನ ನೀಡುತ್ತಿರುವ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ಎರಡು ಸ್ಥಾನ ಮೇಲಕ್ಕೇರಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ.
