ಉದಯವಾಹಿನಿ, ಕೊಲಂಬೊ: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಸಹ-ಆಯೋಜಕ ಶ್ರೀಲಂಕಾ ತಂಡ, ಫೆಬ್ರವರಿ 25ರಂದು ಇಲ್ಲಿನ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ 61 ರನ್‌ಗಳ ಭಾರೀ ಸೋಲು ಅನುಭವಿಸಿ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ದಸೂನ್ ಶಾನಕ ನೇತೃತ್ವದ ಶ್ರೀಲಂಕಾ ತಂಡ, ಗುಂಪು ಹಂತದಲ್ಲಿ ಆರಂಭಿಕ ಮೂರು ಪಂದ್ಯಗಳನ್ನು ಗೆದ್ದು ಟೂರ್ನಿಯ ಅಭಿಯಾನವನ್ನು ಅದ್ಭುತವಾಗಿ ಆರಂಭಿಸಿತ್ತು ಹಾಗೂ ಸುಲಭವಾಗಿ ಸೂಪರ್-8ಕ್ಕೆ ಅರ್ಹತೆ ಪಡೆದಿತ್ತು. ಆದರೆ, ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೋತ ಬಳಿಕ ತಂಡದ ಪ್ರದರ್ಶನ ಕುಸಿತ ಕಂಡಿತು. ಇದಾದ ಬಳಿಕ ಸೂಪರ್-8ರ ಎರಡೂ ಪಂದ್ಯಗಳಲ್ಲಿ ಸೋಲು ಕಂಡು, ಶ್ರೀಲಂಕಾ ಟೂರ್ನಿಯಿಂದ ಹೊರಬಿದ್ದಿದೆ.
ಶ್ರೀಲಂಕಾ ತಂಡದ ನೀರಸ ಪ್ರದರ್ಶನದ ಬಳಿಕ ದಿಗ್ಗಜ ಕುಮಾರ ಸಂಗಕ್ಕಾರ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಅವರು ತಮ್ಮ ಸಂದೇಶವನ್ನು ಪ್ರಕಟಿಸಿದ್ದು, ತಮ್ಮ ಕ್ರಿಕೆಟ್ ದಿನಗಳ ಅನುಭವ ಮತ್ತು ಆ ಸಂದರ್ಭಗಳಲ್ಲಿ ಎದುರಾಗುವ ನಿರಾಶೆಯನ್ನು ನೆನಪಿಸಿಕೊಂಡಿದ್ದಾರೆ. “ಎಲ್ಲೆಡೆ ನೋವು ತುಂಬಿದೆ. ಅಭಿಮಾನಿಗಳು ನೊಂದುಹೋಗಿದ್ದಾರೆ, ನಿರಾಶರಾಗಿದ್ದಾರೆ, ಕೋಪಗೊಂಡಿದ್ದಾರೆ. ಆಟಗಾರರೂ ಸಹ ತೀವ್ರವಾಗಿ ನೋವು ಅನುಭವಿಸುತ್ತಿದ್ದಾರೆ. ನಾನು ಸಹ ಇಂತಹ ಸಂದರ್ಭಗಳನ್ನು ಡ್ರೆಸ್ಸಿಂಗ್ ರೂಮ್‌ಗಳಲ್ಲಿ ಅನುಭವಿಸಿದ್ದೇನೆ. ಇದು ಸುಲಭವಲ್ಲ. ಆದರೆ ದೇಶ ಮತ್ತು ಜನರನ್ನು ಪ್ರತಿನಿಧಿಸುವ ಜವಾಬ್ದಾರಿ ಇದರ ಜೊತೆಯೇ ಬರುತ್ತದೆ. ಇದು ಒಂದು ಭಾರವಾದ ಹೊಣೆಗಾರಿಕೆ, ಆದರೆ ಅದೇ ಸಮಯದಲ್ಲಿ ಮಹತ್ತರ ಗೌರವವೂ ಹೌದು,” ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
