
ಉದಯವಾಹಿನಿ, ಬೆಂಗಳೂರು: ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಫೆಬ್ರವರಿ 27 ರಂದು ಬೆಂಗಳೂರು ಎಫ್‌ಸಿ ಮತ್ತು ಪಂಜಾಬ್ ಎಫ್‌ಸಿ ತಂಡಗಳ ನಡುವೆ 2026ರ ಇಂಡಿಯನ್ ಸೂಪರ್ ಲೀಗ್ 2026 ಟೂರ್ನಿಯ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. ಪಂಜಾಬ್ ಎಫ್‌ಸಿ ತಂಡವು ಸತತ ಎರಡನೇ ಹೊರಗಿನ ಪಂದ್ಯಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದು, ಜಮ್‌ಶೆಡ್‌ಪುರ ಎಫ್‌ಸಿ ವಿರುದ್ಧದ 1-0 ಸೋಲಿನ ಬಳಿಕ ಚೇತರಿಸಿಕೊಳ್ಳುವ ಗುರಿ ಹೊಂದಿದೆ.
ಮತ್ತೊಂದೆಡೆ, ಬೆಂಗಳೂರು ಎಫ್‌ಸಿ ಈ ಸೀಸನ್‌ನ ತನ್ನ ಮೂರನೇ ಪಂದ್ಯಕ್ಕೆ ಸಜ್ಜಾಗಿದೆ. ನಾರ್ತ್‌ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯ 1-1 ಸಮಬಲದಲ್ಲಿ ಅಂತ್ಯಗೊಂಡ ನಂತರ, ಸುನಿಲ್ ಚೆಟ್ರಿ ಸಾರಥ್ಯದ ತಂಡವು ಗೆಲುವಿನ ಹಾದಿಗೆ ಮರಳಲು ಎದುರು ನೋಡುತ್ತಿದೆ. ಎರಡೂ ತಂಡಗಳು ಪೂರ್ಣ 3 ಅಂಕಗಳಿಗಾಗಿ ಹೋರಾಡಲಿರುವುದರಿಂದ ಮೈದಾನದಲ್ಲಿ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.
ಎರಡೂ ಕ್ಲಬ್‌ಗಳು ಹೊಸ ಆಟಗಾರರನ್ನು ಸೇರಿಸಿಕೊಂಡಿರುವುದು ಪಂದ್ಯದ ಕುತೂಹಲವನ್ನು ಹೆಚ್ಚಿಸಿದೆ. ಬೆಂಗಳೂರು ಎಫ್‌ಸಿ ತಂಡ ಮಿಡ್ ಫೀಲ್ಡ್‌ನಲ್ಲಿ ಬ್ರಾಯನ್ ಸಾಂಚೆಝ್ ಅವರ ದೃಷ್ಟಿ ಮತ್ತು ಆಟದ ಸೃಜನಶೀಲತೆ ತಂಡಕ್ಕೆ ಬಲ ತುಂಬಿದೆ. ವಿಂಗರ್ ಅಶಿಕ್ ಕುರುಣಿಯಾನ್ ಅವರ ವೇಗವು ಎದುರಾಳಿ ರಕ್ಷಣಾ ಪಡೆಯನ್ನು ಮಣಿಸಲು ಪ್ರಮುಖ ಅಸ್ತ್ರವಾಗಿದೆ. ಹಾಗೆಯೇ ಸಿರೋಜಿದ್ದಿನ್ ಕುಝಿಯೇವ್ ಅವರ ತಾಂತ್ರಿಕ ಕೌಶಲವು ತಂಡಕ್ಕೆ ಹೊಸ ಚೈತನ್ಯ ನೀಡಲಿದೆ. ಪಂಜಾಬ್ ಎಫ್‌ಸಿ ತಂಡವು ಮಿಡ್‌ಫೀಲ್ಡ್‌ನಲ್ಲಿ ಡ್ಯಾನಿ ರಾಮಿರೆಜ್ ಆಟದ ವೇಗವನ್ನು ನಿಯಂತ್ರಿಸಿದರೆ, ಮುಂಚೂಣಿಯಲ್ಲಿ ದೈಹಿಕವಾಗಿ ಬಲಿಷ್ಠವಾಗಿರುವ ಎಫಿಯಾಂಗ್ ನುಂಗುಸಿ ಗೋಲು ಗಳಿಸುವ ಜವಾಬ್ದಾರಿ ಹೊತ್ತಿದ್ದಾರೆ. ರಕ್ಷಣಾ ವಿಭಾಗದಲ್ಲಿ ಬ್ರೆಜಿಲ್‌ನ ಅನುಭವಿ ಆಟಗಾರ ಪಾಬ್ಲೊ ಸ್ಯಾಂಟೋಸ್ ಅವರ ನಾಯಕತ್ವವು ಬೆಂಗಳೂರಿನ ಆಕ್ರಮಣವನ್ನು ತಡೆಯಲು ನಿರ್ಣಾಯಕವಾಗಲಿದೆ. ಬೆಂಗಳೂರು ತಂಡದ ಫನಾಯ್ ಮಾತನಾಡಿ ‘ನಾನು ಈ ಸ್ಥಾನದಲ್ಲಿ ಆಡಲು ಇಷ್ಟಪಡುತ್ತೇನೆ. ರಕ್ಷಣಾ ಮತ್ತು ದಾಳಿಯ ನಡುವೆ ಸಂಪರ್ಕ ಸಾಧಿಸಿ, ಆಟದ ವೇಗವನ್ನು ನಿಯಂತ್ರಿಸುವುದು ನನ್ನ ಪಾತ್ರದ ಮುಖ್ಯ ಭಾಗ’ ಎಂದರು.
