ಉದಯವಾಹಿನಿ, ‘ಟಾಕ್ಸಿಕ್’ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರವನ್ನು ನಟ ಯಶ್ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಈ ಬಾರಿ ಭಾರತೀಯ ನಟರಲ್ಲ, ಹಾಲಿವುಡ್ ಹಿನ್ನೆಲೆಯ ಕಲಾವಿದ ಡ್ಯಾರೆಲ್ ಡಿ’ಸಿಲ್ವಾ ಚಿತ್ರತಂಡಕ್ಕೆ ಸೇರ್ಪಡೆಯಾಗಿರುವುದು ವಿಶೇಷ.
‘ಸಾಲ್ವಡಾರ್’ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದು, ಇತ್ತೀಚೆಗೆ ಬಿಡುಗಡೆಯಾದ ಪೋಸ್ಟರ್‌ನಲ್ಲಿ ಅವರ ಸ್ಟೈಲಿಷ್ ಲುಕ್ ಗಮನ ಸೆಳೆದಿದೆ.
ಈ ಪಾತ್ರ ಧನಾತ್ಮಕವೇ ಅಥವಾ ಪ್ರತಿನಾಯಕನದೇ ಎಂಬುದನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ಆದರೆ ಪೋಸ್ಟರ್ ನೋಡಿದರೆ ಗಂಭೀರ ಮತ್ತು ಪ್ರಭಾವಶಾಲಿ ವ್ಯಕ್ತಿತ್ವದ ಸೂಚನೆ ಸಿಗುತ್ತದೆ. ಡ್ಯಾರೆಲ್ ಡಿ’ಸಿಲ್ವಾ ರಂಗಭೂಮಿ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ ನಟರು. ‘ರಾಯಲ್ ಶೇಕ್ಸ್‌ಪಿಯರ್ ಕಂಪನಿ’ ಮೂಲಕ ಶೇಕ್ಸಪಿಯರ್ ನಾಟಕಗಳಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದಿದ್ದಾರೆ. ‘ಆಂಟೋನಿ ಅಂಡ್ ಕ್ಲಿಯೋಪಾತ್ರ’ ಹಾಗೂ ‘ಜೂಲಿಯಸ್ ಸೀಸರ್’ ನಾಟಕಗಳಲ್ಲಿ ಅವರ ಅಭಿನಯ ಪ್ರಶಂಸೆಗೆ ಪಾತ್ರವಾಗಿದೆ.
