ಉದಯವಾಹಿನಿ: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಆರಂಭಿಕ ಹಂತದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಭಾರತರ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರನ್ನು ʻಸ್ಲಾಗರ್ʼ ಎಂದು ಟೀಕಿಸಿದ್ದ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ಮೊಹಮ್ಮದ್ ಆಮಿರ್ ಇದೀಗ ಯು-ಟರ್ನ್ ಹೊಡೆದಿದ್ದಾರೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದ ಬಳಿಕ ಭಾರತ ತಂಡದ ಎಡಗೈ ಬ್ಯಾಟ್ಸ್‌ಮನ್ ಅನ್ನು ಪಾಕ್ ಮಾಜಿ ವೇಗಿ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ಚೆನ್ನೈನ ಎಂಎ ಚಿದಂಬರಂನಲ್ಲಿ ನಡೆದಿದ್ದ ಜಿಂಬಾಬ್ವೆ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಭಾರತ ಪರ ಸ್ಫೋಟಕ ಅರ್ಧಶತಕ ಸಿಡಿಸಿದರು. ಈ ಇನಿಂಗ್ಸ್‌ನ ನಂತರ ಮೊಹಮ್ಮದ್ ಆಮಿರ್ ಅಭಿಷೇಕ್ ಶರ್ಮಾ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ಪಾಕಿಸ್ತಾನದ ಚಾನೆಲ್‌ನಲ್ಲಿ ಅಭಿಷೇಕ್ ಶರ್ಮಾ ಅವರ ಇನಿಂಗ್ಸ್ ಬಗ್ಗೆ ಮಾತನಾಡಿದ ಮೊಹಮ್ಮದ್ ಆಮಿರ್, “ಅಭಿಷೇಕ್ ಶರ್ಮಾ ಸರಿಯಾದ ಸಮಯದಲ್ಲಿ ಫಾರ್ಮ್‌ನಲ್ಲಿ ಇರುವುದು ಅವರ ಪಾಲಿಗೆ ಒಳ್ಳೆಯದು, ಆದರೆ ಅವರ ಮುಂದೆ ನಿರ್ಣಾಯಕ ಪಂದ್ಯವಿದೆ, ಮುಂದಿನ ಪಂದ್ಯ ಕೂಡ ಮಾಡು ಇಲವೇ ಮಡಿ ಪಂದ್ಯ. ನೀವು ಇಂದು (ಗುರುವಾರ) ಅವರ ಬ್ಯಾಟಿಂಗ್ ಅನ್ನು ನೋಡಿದರೆ, ಅವರು ಚೆಂಡಿಗಾಗಿ ಕಾಯುತ್ತಿದ್ದಾರೆ. ಅವರು ಲೆಗ್ ಸೈಡ್‌ನ ಮುಂಭಾಗದಲ್ಲಿ ಮತ್ತು ಆಫ್ ಸೈಡ್‌ನಲ್ಲಿಯೂ ಸಹ ಹೊಡೆತಗಳನ್ನು ಹೊಡೆಯುತ್ತಿದ್ದರು. ಪಂದ್ಯದ ಸಮಯದಲ್ಲಿ, ರವಿಶಾಸ್ತ್ರಿ ಅವರು ಪ್ರತಿ ಚೆಂಡನ್ನು ಬಲವಾಗಿ ಹೊಡೆಯಲು ಪ್ರಯತ್ನಿಸದೆ, ಸಮತೋಲನದಿಂದ ಚೆಂಡನ್ನು ಸಮಯಕ್ಕೆ ತಕ್ಕಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುತ್ತಿದ್ದರು. ನೇರವಾಗಿ ಮತ್ತು ಲೈನ್‌ನಲ್ಲಿ ಆಡುತ್ತಿರುವ ಅವರು ಅಭ್ಯಾಸ ಮಾಡುತ್ತಿರುವ ವಿಡಿಯೊವನ್ನು ಸಹ ತೋರಿಸಿದರು,” ಎಂದು ಹೇಳಿದ್ದಾರೆ.
