ಉದಯವಾಹಿನಿ, ಬೆಂಗಳೂರು: ನಗರದಲ್ಲಿ ಸೆರೆ ಸಿಕ್ಕಿರುವ ಐವರು ಶಂಕಿತ ಉಗ್ರರ ಪೈಕಿ ಆರೋಪಿಯೊಬ್ಬನ ಕೊಡುಗೆಹಳ್ಳಿಯ ಮನೆ ಪರಿಶೀಲಿಸಿದ್ದಾಗ ಪತ್ತೆಯಾದ ನಾಲ್ಕು ಜೀವಂತ ಗ್ರೆನೆಡ್ಗಳು ವಿದೇಶದಲ್ಲಿ ತಯಾರಾಗಿವೆ ಎಂಬುದನ್ನು ಸಿಸಿಬಿ ಪೋಲಿಸರ ತನಿಖೆಯಿಂದ ತಿಳಿದುಬಂದಿದೆ.
ವಿದೇಶದಲ್ಲಿ ತಯಾರಾದ ಈ ಗ್ರೆನೆಡ್ಗಳು ಪಾರ್ಸೆಲ್ ರೂಪದಲ್ಲಿ ಶಂಕಿತ ಉಗ್ರನ ಕೈ ಸೇರಿವೆ. ಅವುಗಳನ್ನು ಈ ಆರೋಪಿಯು ತನ್ನ ಮನೆಯ ಅಲ್ಮೇರಾದಲ್ಲಿ ಬಚ್ಚಿಟ್ಟಿದ್ದ ಪೋಲಿಸರು ಆತನ ಮನೆಯನ್ನು ಶೋಧಿಸಿದ್ದಾಗ ಗ್ರೆನೆಡ್ಗಳು ಪತ್ತೆಯಾಗಿದ್ದವು. ಇದೀಗ ಅವುಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ಗ್ರೆನೆಡ್ಗಳಿದ್ದ ಪಾರ್ಸಲ್ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆ ಸಿಸಿಬಿ ಪೋಲಿಸರು ತನಿಖೆ ಕೈಗೊಂಡಿದ್ದಾರೆ. ನಾಡಪಿಸ್ತೂಲ್ ಹಾಗೂ ಜೀವಂತ ಗುಂಡುಗಳು ತಂದುಕೊಟ್ಟ ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದು, ಆತನ ಶೋಧ ಕಾರ್ಯ ಮುಂದುವರಿದಿದೆ. ಹೆಬ್ಬಾಳದ ಸುಲ್ತಾನಪಾಳ್ಯದ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಐದು ಮಂದಿ ಶಂಕಿತ ಉಗ್ರರನ್ನು ಬಂಧಿಸಿದ್ದರು. ಈ ಐದು ಮಂದಿ ಶಂಕಿತರು ಹಾಗೂ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಹೋಗಿದ್ದಾಗ, ಬೆಂಗಳೂರು ಸರಣಿ ಬಾಂಬ್ ಸ್ಪೋಟದ ಪ್ರಮುಖ ಆರೋಪಿ ನಾಸೀರ್ ಇವರನ್ನು ತನ್ನತ್ತ ಸೆಳೆದುಕೊಂಡು ಅವರ ಬ್ರೈನ್ವಾಷ್ ಮಾಡಿ ನಗರದಲ್ಲಿ ಸೋಟ ಮಾಡಲು ಪ್ರೆರೇಪಿಸಿರುವುದು ವಿಚಾರಣೆಯಿಂದ ಗೊತ್ತಾಗಿದೆ. ಸಿಸಿಬಿ ಪೋಲಿಸರು ನಾಸೀರ್ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿ ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
