ಉದಯವಾಹಿನಿ,
: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಎಲ್ಲರನ್ನು ಆಹ್ವಾನಿಸಿ ಅದ್ದೂರಿಯಾಗಿಯೇ ಆಚರಿಸಬೇಕೆಂಬ ಚಿಂತನೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಬ್ಬಕ್ಕೆ ನೆಂಟರಿಷ್ಟರನ್ನು ಕರೆದು ಅರ್ಧ ಊಟ ಮಾಡಿ ಎಂದು ಹೇಳಲು ಸಾಧ್ಯವೇ? ಕಷ್ಟವೋ, ಸುಖವೋ ಮರಿಯಂತೂ ಹೊಡೆಯುತ್ತೇವೆ ಅಲ್ವಾ? ಹಾಗೆಯೇ ಎಲ್ಲರನ್ನು ಕರೆದು ಅದ್ದೂರಿಯಾಗಿಯೇ ಮಾಡೋಣ ಎಂದು ನಗುತ್ತಾ ಹೇಳಿದರು.
ಕೋವಿಡ್ನಿಂದ ಜನ ತತ್ತರಿಸಿ ಹೋಗಿದ್ದರು. ಈಗ ಎಲ್ಲವೂ ಸುಭೀಕ್ಷವಾಗಿ ನಡೆಯುತ್ತಿದೆ. ಹೊಸ ಸರ್ಕಾರ ಬಂದಿದೆ, ಉತ್ತಮ ಮಳೆಯಾಗಿದೆ. ಎಲ್ಲರೂ ಮನಬಿಚ್ಚಿ ಉತ್ತಮ ದಸರಾ ಮಾಡೋಣ ಎಂದು ತಿಳಿಸಿದರು. ಮೈಸೂರಿನ ಸಂಸ್ಕೃತಿ, ಮಹರಾಜರ ಪರಂಪರೆ ಎಲ್ಲವನ್ನು ಉಳಿಸಿಕೊಂಡು ದಸರಾ ಮಾಡಬೇಕಿದೆ. ಇದೆಲ್ಲದರ ಬಗ್ಗೆ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು. ಪೂರ್ವ ಮುಂಗಾರು ಮಳೆ ವಿವಿಧ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಬಿದ್ದಿದೆ. ವಾಡಿಕೆಯಂತೆ ಮಾರ್ಚ್ ನಿಂದ ಮೇ ವರಗೆ 198 ಮಿ.ಮೀ ಬೀಳಬೇಕಿತ್ತು. ಈ ಬಾರಿ 207 ಮಿ.ಮೀಗೂ ಹೆಚ್ಚು ಮಳೆಯಾಗಿದೆ ಎಂದು ತಿಳಿಸಿದರು. ಮೈಸೂರಲ್ಲಿ ಮಳೆ ಕೊರತೆಯಾಗಿದೆ. ಮುಂಗಾರಿನಲ್ಲಿ 3.97 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಈಗ 2.11 ಬಿತ್ತನೆ ಆಗಿದೆ ಎಂದು ಅವರು ಹೇಳಿದರು.
