ಜಿಂಬಾಬ್ವೆ ವಿರುದ್ಧ‌  ಟಿ20 ವಿಶ್ವಕಪ್‌ ಸೂಪರ್‌-8 ಪಂದ್ಯದಲ್ಲಿ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಮೂರು ವಿಕೆಟ್‌ ಕಿತ್ತು, ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತೀಯನೊಬ್ಬ ಗಳಿಸಿದ ಅತಿ ಹೆಚ್ಚು ವಿಕೆಟ್‌ಗಳ ದಾಖಲೆಯನ್ನು ಮುರಿದರು. ಮೂರು ವಿಕೆಟ್ ಕಬಳಿಸುವುದರೊಂದಿಗೆ, ಅರ್ಶ್‌ದೀಪ್ ಟಿ20 ವಿಶ್ವಕಪ್ ಇತಿಹಾಸದಲ್ಲಿ 35 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಜಸ್ಪ್ರೀತ್ ಬುಮ್ರಾ(33 ವಿಕೆಟ್‌) ಹೆಸರಿನಲ್ಲಿತ್ತು. ಸದ್ಯ ಅವರು ಈಗ ಎರಡನೇ ಸ್ಥಾನದಲ್ಲಿದ್ದಾರೆ. ರವಿಚಂದ್ರನ್ ಅಶ್ವಿನ್ 32 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಅರ್ಶ್‌ದೀಪ್, ಹಾಲಿ ಆವೃತ್ತಿಯಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಆಗಿದ್ದು, ಐದು ಪಂದ್ಯಗಳಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸ್ಪಿನ್ ಮಾಂತ್ರಿಕ ವರುಣ್ ಚಕ್ರವರ್ತಿ ಆರು ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಪಡೆದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆದಾಗ್ಯೂ, ಅವರ ಫಾರ್ಮ್ ಸ್ವಲ್ಪ ಕಳವಳಕಾರಿಯಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 47 ರನ್‌ಗಳನ್ನು ಮತ್ತು ನಂತರ ಜಿಂಬಾಬ್ವೆ ವಿರುದ್ಧ 35 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ಗಳು
ಅರ್ಷದೀಪ್ ಸಿಂಗ್-35 ವಿಕೆಟ್‌

ಜಸ್ಪ್ರೀತ್ ಬುಮ್ರಾ- 33 ವಿಕೆಟ್‌

ರವಿಚಂದ್ರನ್ ಅಶ್ವಿನ್- 32 ವಿಕೆಟ್‌

ಹಾರ್ದಿಕ್ ಪಾಂಡ್ಯ- 29 ವಿಕೆಟ್‌

ರವೀಂದ್ರ ಜಡೇಜಾ- 22 ವಿಕೆಟ್‌

ಪಂದ್ಯದ ನಂತರ ಮಾತನಾಡಿದ ಅರ್ಷ್‌ದೀಪ್ ತಮ್ಮ ಕುಟುಂಬದೊಂದಿಗೆ ವೆಸ್ಟ್ ಇಂಡೀಸ್ vs ದಕ್ಷಿಣ ಆಫ್ರಿಕಾ ಪಂದ್ಯವನ್ನು ವೀಕ್ಷಿಸಿದ್ದಾಗಿ ಬಹಿರಂಗಪಡಿಸಿದರು. “ನನ್ನ ಕುಟುಂಬ ಹೋಟೆಲ್ ಕೋಣೆಯಲ್ಲಿ ನನ್ನೊಂದಿಗೆ ಇರುತ್ತಿತ್ತು ಮತ್ತು ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳು ಸಿಕ್ಸರ್ ಬಾರಿಸಿದಾಗಲೆಲ್ಲಾ, ನನ್ನ ತಂದೆ ‘ನೀವು ಏನು ಮಾಡುತ್ತಿದ್ದೀರಿ?’ ಎಂದು ಕೂಗಲು ಪ್ರಾರಂಭಿಸಿದರು. ಅವರು ನಿಂದನೆ ಮಾಡುತ್ತಿದ್ದರು. ನಾನು ಅವರನ್ನು ಸಮಾಧಾನಪಡಿಸಿ, ಕ್ರಿಕೆಟ್ ಅನ್ನು ಆನಂದಿಸಿ ಮತ್ತು ದಕ್ಷಿಣ ಆಫ್ರಿಕಾದ ಗೆಲುವಿಗಾಗಿ ಪ್ರಾರ್ಥಿಸುತ್ತಾ ಇರಿ ಎಂದು ಹೇಳಿದೆ” ಎಂದು ಅರ್ಶ್‌ದೀಪ್ ಹೇಳಿದರು.ಈ ಪಂದ್ಯವು ಭಾರತಕ್ಕೆ ಭಾರಿ ಮಹತ್ವದ್ದಾಗಿತ್ತು, ಏಕೆಂದರೆ ವೆಸ್ಟ್ ಇಂಡೀಸ್‌ನ ಗೆಲುವು ಭಾರತದ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಭರವಸೆಯನ್ನು ಹಾಳು ಮಾಡಬಹುದಿತ್ತು.

Leave a Reply

Your email address will not be published. Required fields are marked *

error: Content is protected !!