ಉದಯವಾಹಿನಿ, ಭಾರತ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್, ವರುಣ್ ಚಕ್ರವರ್ತಿ ಅವರ ಇತ್ತೀಚಿನ ಕಳಪೆ ಫಾರ್ಮ್ ಬಗ್ಗೆ ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. ಕೊಲ್ಕತ್ತಾದಲ್ಲಿ ಮಾರ್ಚ್ ಒಂದರಂದು ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮಾಡು ಇಲ್ಲವೇ ಮಡಿ ಸೂಪರ್-8ರ ಕೊನೆಯ ಪಂದ್ಯದಲ್ಲಿ ಅವರು ಲಯಕ್ಕೆ ಮರಳಲಿದ್ದಾರೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. 2026ರ ಐಸಿಸಿ ಟಿ20 ವಿಶ್ವಕಪ್ ) ಟೂರ್ನಿಯಲ್ಲಿ ಒಟ್ಟಾರೆ ವರುಣ್ ಭಾರತ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ. ಆರು ಪಂದ್ಯಗಳಲ್ಲಿ 7.20ರ ಎಕಾನಮಿ ರೇಟ್‌ನಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಇಲ್ಲಿಯ ತನಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಸಾಲಿನಲ್ಲಿ ಐದನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ಲೀಗ್ ಹಂತದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದ ವರುಣ್ ಚಕ್ರವರ್ತಿ, ಸೂಪರ್ 8 ಹಂತದಲ್ಲಿ ಅವರ ಪ್ರಭಾವ ಕುಸಿದಿದೆ. ಆರಂಭಿಕ ಹಂತದಂತೆಯೇ ಪರಿಣಾಮಕಾರಿ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆದರೂ ನಿರ್ಣಾಯಕ ಘಟ್ಟದಲ್ಲಿ ಅವರು ಮತ್ತೆ ತಮ್ಮ ಅಗ್ರ ದರ್ಜೆಯ ಬೌಲಿಂಗ್ ಪ್ರದರ್ಶನವನ್ನು ತೋರಲಿದ್ದಾರೆಂಬ ನಂಬಿಕೆಯನ್ನು 2007ರ ಐಸಿಸಿ ಟಿ20 ವಿಶ್ವಕಪ್ ವಿಜೇತ ಆಲ್‌ರೌಂಡರ್ ಪಠಾಣ್ ವ್ಯಕ್ತಪಡಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಇರ್ಫಾನ್ ಪಠಾಣ್, ವರುಣ್ ಚಕ್ರವರ್ತಿ ಅವರ ಇತ್ತೀಚಿನ ಹೋರಾಟಕ್ಕೆ ಕಾರಣವಾದ ಪ್ರಮುಖ ಅಂಶವೆಂದರೆ ಲೆನ್ತ್‌ನಲ್ಲಿ ಕಂಡುಬಂದ ಅಸ್ಥಿರತೆ ಎಂದು ಹೇಳಿದ್ದಾರೆ. ವಿಶೇಷವಾಗಿ ಬಲಗೈ ಬ್ಯಾಟರ್‌ಗಳ ವಿರುದ್ಧ ಸರಿಯಾದ ಲೆನ್ತ್ ಕಾಯ್ದುಕೊಳ್ಳಲು ವಿಫಲವಾಗಿರುವುದೇ ಸಮಸ್ಯೆ ಎಂದು ಅವರು ವಿಶ್ಲೇಷಿಸಿದರು.
“ವರುಣ್ ಚಕ್ರವರ್ತಿ ಬಗ್ಗೆ ಚಿಂತೆಯಿದೆ. ಅವರ ಸುಮಾರು ಶೇಕಡಾ 63 ರಷ್ಟು ಎಸೆತಗಳಲ್ಲಿ ಶಾರ್ಟ್ ಲೆನ್ತ್‌ನಲ್ಲಿ ಬಿದ್ದಿವೆ. ಸಾಂಪ್ರದಾಯಿಕ ಸ್ಪಿನ್ನರ್‌ಗಳಿಗಿಂತ ಅವರು ಶಾರ್ಟ್ ಲೆನ್ತ್‌ನಲ್ಲಿ ಬೌಲ್ ಮಾಡುತ್ತಾರೆ, ಆದರೆ ಇಷ್ಟು ಶಾರ್ಟ್ ಆಗಿ ಅಲ್ಲ. ಕಳೆದ ಎರಡು ಪಂದ್ಯಗಳಲ್ಲಿ ಅವರು ಎಡಗೈ ಬ್ಯಾಟರ್‌ಗಳಿಗೆ ಫುಲ್ಲರ್ ಲೆನ್ತ್‌ನಲ್ಲಿ ಬೌಲ್ ಮಾಡಿದ್ದಾರೆ, ಆದರೆ ಬಲಗೈ ಬ್ಯಾಟರ್‌ಗಳಿಗೆ ಹೆಚ್ಚು ಶಾರ್ಟ್ ಲೆನ್ತ್ ಹಾಕಿದ್ದಾರೆ. ಇದು ಉದ್ದೇಶಿತ ತಂತ್ರದ ಬದಲಾವಣೆ ಆಗಿದ್ದರೆ, ಅದು ಸಮಸ್ಯೆ ಉಂಟುಮಾಡಬಹುದು,” ಎಂದು ಪಠಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
