ಉದಯವಾಹಿನಿ, ಬಹುನಿರೀಕ್ಷಿತ 2026ರ ಇಂಡಿಯನ್ ಪ್ರೀಮಿಯರ್ ಲೀಗ್ 2026) ಮಾರ್ಚ್ 28 ರಿಂದ ಆರಂಭವಾಗುವ ಸಾಧ್ಯತೆ ಇದ್ದು, ಫೈನಲ್ ಪಂದ್ಯ ಮೇ 31ರಂದು ನಡೆಯುವಂತೆ ಯೋಜನೆ ರೂಪಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಆರಂಭದಲ್ಲಿ ಟೂರ್ನಿ ಮಾರ್ಚ್ 26ರಂದು ಆರಂಭಿಸಬೇಕೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಆರಂಭ ದಿನಾಂಕವನ್ನು ಇದೀಗ ಎರಡು ದಿನ ಮುಂದಕ್ಕೆ ಹಾಕಲಾಗಿದೆ ಎಂದು ಮೂಲಗಳಿಂದ ಮಾಹಿತಿ ಕಲೆ ಹಾಕಿ ಇಂಡಿಯಾ ಟುಡೇ ವರದಿ ಮಾಡಿದೆ. ಈ ಬದಲಾವಣೆಯಿಂದ ಫ್ರಾಂಚೈಸಿಗಳು ಹಾಗೂ ಇತರ ಸಂಬಂಧಿತ ಘಟಕಗಳಿಗೆ ಹೊಸ ಸೀಸನ್‌ಗೆ ಸಿದ್ಧತೆ ನಡೆಸಲು ಹೆಚ್ಚುವರಿ ಸಮಯ ಸಿಕ್ಕಂತಾಗಿದೆ.

ಮುಂದಿನ ವಾರ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಸಭೆ ನಡೆಯಲಿದ್ದು, ತಿದ್ದುಪಡಿಸಿದ ದಿನಾಂಕಗಳಿಗೆ ಅಧಿಕೃತ ಅನುಮೋದನೆ ನೀಡುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಉದ್ಘಾಟನಾ ಪಂದ್ಯ ಮತ್ತು ಫೈನಲ್ ಪಂದ್ಯಕ್ಕೆ ಸ್ಥಳಗಳು ಸೇರಿದಂತೆ ಸಂಪೂರ್ಣ ವೇಳಾಪಟ್ಟಿಗೆ ಅಧಿಕೃತ ಮುದ್ರೆ ಬೀಳುವ ನಿರೀಕ್ಷೆ ಇದೆ. ಒಪ್ಪಿಗೆ ಸಿಕ್ಕ ಬಳಿಕ, ಪೂರ್ಣ ವೇಳಾಪಟ್ಟಿ ಮತ್ತು ಸ್ಥಳಗಳ ವಿವರಗಳನ್ನು ಪ್ರಕಟಿಸಲಾಗುತ್ತದೆ. ಇದು ಮುಂದಿನ ಎರಡು ತಿಂಗಳ ಹೊಡಿ ಬಡಿ ರೋಚಕ ಟಿ20 ಕ್ರಿಕೆಟ್ ಹಬ್ಬಕ್ಕೆ ವೇದಿಕೆ ಸಜ್ಜು ಮಾಡಲಿದೆ. ಮೂಲಗಳ ಪ್ರಕಾರ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳ ವಿಧಾನಸಭೆ ಚುನಾವಣೆಯ ದಿನಾಂಕಗಳು ಇನ್ನೂ ಅಂತಿಮಗೊಳ್ಳದಿರುವುದರಿಂದ ವೇಳಾಪಟ್ಟಿ ಪ್ರಕಟಣೆ ವಿಳಂಬವಾಗಿದೆ. ಕೋಲ್ಕತಾ (ಪಶ್ಚಿಮ ಬಂಗಾಳ) ಮತ್ತು ಚೆನ್ನೈ (ತಮಿಳುನಾಡು) ಕ್ರಮವಾಗಿ ಕೊಲ್ಕತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ತವರು ಮೈದಾನಗಳಾಗಿವೆ. ಅಸ್ಸಾಂ ರಾಜಧಾನಿ ಗುವಾಹಟಿ, ರಾಜಸ್ಥಾನ್ ರಾಯಲ್ಸ್ ತಂಡದ ಎರಡನೇ ತವರು ಅಂಗಣವಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!