ಉದಯವಾಹಿನಿ, ಬೆಂಗಳೂರು: ಮುಂಬರುವ ಹಲವು ರಾಜ್ಯಗಳ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಹಲವು ಪದಾಧಿಕಾರಿಗಳನ್ನು ಬದಲಾವಣೆ ಮಾಡಿದೆ. ಕರ್ನಾಟಕದಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ಸಿ.ಟಿ.ರವಿ ಅವರಿಗೆ ಕೋಕ್ ನೀಡಲಾಗಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗುವ ಸಾಧ್ಯತೆ ಹೆಚ್ಚಾಗಿದೆ.
ಕಳೆದ ರಾತ್ರಿ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರುಗಳು ಕರ್ನಾಟಕದ ಬೆಳವಣಿಗೆ ಕುರಿತಂತೆ ಮಾತುಕತೆ ನಡೆಸಿದ್ದಾರೆ. ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವ
ರ ಅಧಿಕಾರ ಮುಗಿದಿದ್ದು, ಸದ್ಯದಲ್ಲೇ ಅವರು ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ತೆರವಾಗಲಿರುವ ಈ ಸ್ಥಾನಕ್ಕೆ ಸಂಘ ಪರಿವಾರದ ನೀಲಿ ಕಂಗಳ ಹುಡುಗನೆಂದೇ ಗುರುತಿಸಿಕೊಂಡಿರುವ ರವಿ ಅವರಿಗೆ ಪಟ್ಟ ಕಟ್ಟಲು ಒಲವು ತೋರಿದೆ.ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಮೇಲೆ ಹಲವರು ಕಣ್ಣಿಟ್ಟಿದ್ದರೂ ಈ ಬಾರಿ ಹಿಂದುತ್ವ ಹಾಗೂ ಸಂಘ ಪರಿವಾರ ನಿಷ್ಠೆಯುಳ್ಳವರಿಗೆ ಸ್ಥಾನ ಕಲ್ಪಿಸಬೇಕೆಂದು ಆರ್‍ಎಸ್‍ಎಸ್ ನಾಯಕರು ಕಿವಿಮಾತು ಹೇಳಿದ್ದರು. ಚಿಕ್ಕಮಗಳೂರಿನ ಬಾಬಾ ಬುಡನ್‍ಗಿರಿ ವಿವಾದದಿಂದ ರಾಜಕಾರಣಕ್ಕೆ ಮುನ್ನೆಲೆಗೆ ಬಂದ ಸಿ.ಟಿ.ರವಿ ಪ್ರಖರ ಹಿಂದುತ್ವವಾದಿ ಹಾಗೂ ಉತ್ತಮ ವಾಗ್ಮಿಯೂ ಹೌದು. ನಾಲ್ಕು ಬಾರಿ ಚಿಕ್ಕಮಗಳೂರಿ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ಅವರು ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ತಮ್ಮಯ್ಯ ಎದುರು ಪರಾಭವಗೊಂಡಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಗೋವಾ, ಮಹಾರಾಷ್ಟ್ರ ರಾಜ್ಯದ ಉಸ್ತುವಾರಿಯಾಗಿದ್ದರೂ ಅನಂತಕುಮಾರ್ ಅವರಂತೆ ರಾಷ್ಟ್ರಮಟ್ಟದಲ್ಲಿ ವೈಯಕ್ತಿಕ ವರ್ಚಸ್ಸು ಹಾಗೂ ಛಾಪು ಮೂಡಿಸಿಕೊಳ್ಳುವಲ್ಲಿ ವಿಫಲರಾದರು ಎಂಬ ಮಾತುಗಳು ಕೇಳಿಬಂದಿದ್ದವು.
