ಉದಯವಾಹಿನಿ, ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ‘ದಿ ಕೇರಳ ಸ್ಟೋರಿ’ ಸಿನಿಮಾದ ಸೀಕ್ವೆಲ್ ಈಗ ಕಾನೂನು ಸಂಘರ್ಷಕ್ಕೆ ಸಿಲುಕಿದೆ. ಮಾರ್ಚ್ 3ರಂದು ನಿವೃತ್ತ ಸಮಾಜ ವಿಜ್ಞಾನ ಶಿಕ್ಷಕರೊಬ್ಬರು ಹಾಗೂ ವಕೀಲರು ಜಂಟಿಯಾಗಿ ಕೇರಳ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದು, ಚಿತ್ರದ ವಿರುದ್ಧ ಹಲವು ಗಂಭೀರ ಆಕ್ಷೇಪಗಳನ್ನು ಎತ್ತಿದ್ದಾರೆ.
ಅರ್ಜಿದಾರರ ಪ್ರಮುಖ ಬೇಡಿಕೆಗಳು:
ಚಿತ್ರದ ಶೀರ್ಷಿಕೆಯಿಂದ ‘ಕೇರಳ’ ಎಂಬ ಪದವನ್ನು ಕೂಡಲೇ ತೆಗೆದುಹಾಕಬೇಕು. ವಿವಾದಾತ್ಮಕ ಅಂಶಗಳಿರುವ ಈ ಚಿತ್ರದ ಬಿಡುಗಡೆಗೆ ನ್ಯಾಯಾಲಯ ತಡೆ ನೀಡಬೇಕು. ಇದು ಕೇವಲ ‘ಕಾಲ್ಪನಿಕ ಕಥೆ’ ಎಂಬ ಎಚ್ಚರಿಕೆ ಸಂದೇಶವನ್ನು ಸಿನಿಮಾದಲ್ಲಿ ಪ್ರಮುಖವಾಗಿ ಪ್ರದರ್ಶಿಸಬೇಕು.
ಅರ್ಜಿದಾರರ ಪ್ರಕಾರ, ಈ ಚಿತ್ರವು ಕೇರಳ ರಾಜ್ಯವನ್ನು ‘ಬಲವಂತದ ಧಾರ್ಮಿಕ ಮತಾಂತರದ ಕೇಂದ್ರ’ ಎಂಬಂತೆ ಬಿಂಬಿಸುತ್ತಿದೆ. ಇದು ರಾಜ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಘನತೆಗೆ ಮಸಿ ಬಳಿಯುವ ತಂತ್ರವಾಗಿದೆ ಎಂದು ಅವರು ವಾದಿಸಿದ್ದಾರೆ. ಅಲ್ಲದೆ, ಚಿತ್ರವು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷವನ್ನು ಪ್ರಚೋದಿಸುವಂತಿದ್ದು, ಕೇರಳದ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಕೇವಲ ಈ ಸಿನಿಮಾಗೆ ಸೀಮಿತವಾಗದೆ, ಕೇಂದ್ರ ಸರ್ಕಾರ ಮತ್ತು ಸೆನ್ಸಾರ್ ಮಂಡಳಿಗೆ ನ್ಯಾಯಾಲಯವು ಹೊಸ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ. ಯಾವುದೇ ಸಿನಿಮಾವು ಯಾವುದೇ ರಾಜ್ಯ ಜಾತಿ ಅಥವಾ ಧರ್ಮದ ಅಸ್ಥಿತೆಯನ್ನು ಅವಹೇಳನ ಮಾಡದಂತೆ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂಬುದು ಅವರ ಪ್ರಮುಖ ಮನವಿ.
ಈಗಾಗಲೇ ಮೊದಲ ಭಾಗವು ಕೇರಳದಲ್ಲಿ ನೀರಸ ಪ್ರತಿಕ್ರಿಯೆ ಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡಿಲ್ಲ. ಈಗ ಎರಡನೇ ಭಾಗದ ವಿರುದ್ಧ ಸಲ್ಲಿಕೆಯಾಗಿರುವ ಈ ಅರ್ಜಿ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ನಡುವಿನ ಹೊಸ ಚರ್ಚೆಗೆ ನಾಂದಿ ಹಾಡಿದೆ. ಹೈಕೋರ್ಟ್ ಈ ಅರ್ಜಿಯನ್ನು ಶೀಘ್ರದಲ್ಲೇ ವಿಚಾರಣೆಗೆ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *

error: Content is protected !!