
ಉದಯವಾಹಿನಿ ಕುಶಾಲನಗರ: ಶ್ರೀ ದುರ್ಗಾ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಉದ್ಘಾಟನಾ ಕಾರ್ಯಕ್ರಮ ಕಣಿವೆ ರಾಮಲಿಂಗೇಶ್ವರ ಸಭಾಂಗಣದಲ್ಲಿ ನಡೆಯಿತು.
ಮಾಜಿ ಸಚಿವ ಅಪ್ಪಚ್ಚುರಂಜನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕುರಿ ಸಾಕಣೆ ಅತ್ಯಂತ ಲಾಭದಾಯಕ ಕೃಷಿ. ಬೆಳೆಗಾರರು ಮಿಶ್ರ ಬೆಳೆಗಳಿಗೆ ಒತ್ತು ನೀಡಿದಲ್ಲಿ ಮಾತ್ರ ಲಾಭಗಳಿಸಲು ಸಾಧ್ಯ. ತಮ್ಮಲಿರುವ ಜಮೀನು, ಸಂಪನ್ಮೂಲಗಳನ್ನು ಬಳಸಿಕೊಂಡು ಮಿಶ್ರ ಬೆಳೆಯೊಂದಿಗೆ ಹೈನುಗಾರಿಕೆ, ಕುರಿ, ಮೇಕೆ ಸಾಕಣೆಗೆ ಮುಂದಾದಲ್ಲಿ ಹೆಚ್ಚಿನ ಲಾಭಗಳಿಸಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಸಂಸದ, ಎಂಎಲ್ಸಿ ಎಚ್.ವಿಶ್ವನಾಥ್ ಮಾತನಾಡಿ, ಕುರಿಗಳು ನಡೆದಾಡುವ ಬ್ಯಾಂಕ್ ಇದ್ದಂತೆ. ಮನೆಯಲ್ಲೆರೆಡು ಕುರಿಗಳಿದ್ದರೆ ಲಕ್ಷ್ಮಿಯಿದ್ದಂತೆ. ಮೇಕೆ ಹಾಲಿಗೆ ಅತ್ಯಂತ ಬೇಡಿಕೆಯಿದೆ. ಕುರಿ ಮತ್ತು ಮೇಕೆಗಳು ಆದಾಯದ ಮೂಲಗಳು. ಇಂದು ಕೇವಲ ಕುರುಬ ವರ್ಗದವರು ಮಾತ್ರವಲ್ಲದೆ ಎಲ್ಲಾ ಜನಾಂಗದವರು ಕುರಿ,ಮೇಕೆ ಸಾಕಾಣಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದರು. ಅತಿಥಿಗಳಾಗಿ ಮೈಸೂರಿನ ಕುರಿ ಮತ್ತು ಉಣ್ಣೆ ನಿಗಮದ ಸಹಾಯಕ ನಿರ್ದೇಶಕ ನಾಗರಾಜು ಜಿಲ್ಲಾ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಲಿಂಗರಾಜು ದೊಡ್ಡಮನಿ ಮಾತನಾಡಿ ಕೃಷಿಯೊಂದಿಗೆ ಮೇಕೆ, ಕುರಿ, ಕೋಳಿ ಸಾಕಣೆ, ಹೈನುಗಾರಿಕೆಯಂತಹ ವಿವಿಧ ಆದಾಯ ಮೂಲಗಳನ್ನು ಸೃಷ್ಠಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗಲು ಕರೆ ನೀಡಿದರು.ಅಧ್ಯಕ್ಷತೆ ಸಂಘದ ಅಧ್ಯಕ್ಷ ಡಿ.ಆರ್.ಪ್ರಭಾಕರ್ ವಹಿಸಿದ್ದರು. ಸಂಘದ ಕಾರ್ಯದರ್ಶಿ ಭರಮಣ್ಣ ಟಿ ಬೆಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಕುರಿ,ಮೇಕೆ ಸಾಕಾಣಿಕೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಸದಸ್ಯರಿಗೆ ಸದಸ್ವತ್ವ ಕಾರ್ಡ್ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಹೆಬ್ಬಾಲೆ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಂಜೀವ್ ಶಿಂಧೆ, ಸಂಘದ ಉಪಾಧ್ಯಕ್ಷ ಬಿ.ಕೆ.ಮೋಹನ್, ನಿರ್ದೇಶಕರಾದ ಉದಯಕುಮಾರ್, ಚಿಕ್ಕಯ್ಯ, ಪುಟ್ಟಸ್ವಾಮಿ, ಮಹಾದೇವ್, ಶಾಂತ, ಸಾವಿತ್ರಿ ನಿಂಗರಾಜಮ್ಮ, ಜಗದೀಶ, ಮಹೇಶ್, ಗಣೇಶ್, ಗಿರೀಶ್, ಪುನೀತ್, ರವಿ, ಜಯಶ್ರೀ, ನಟರಾಜ ಮತ್ತಿತರರು ಇದ್ದರು.
