ಉದಯವಾಹಿನಿ, 13 ವರ್ಷಗಳ ಸೋಲಿನ ಓಟಕ್ಕೆ ಬ್ರೇಕ್ ಹಾಕಿದ ಮುಂಬೈ ಇಂಡಿಯನ್ಸ್ ಕೊನೆಗೂ ಐಪಿಎಲ್‌ನ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿದೆ. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ರಿಯನ್ ರಿಕಲ್ಟನ್ ಅವರ ಸ್ಫೋಟಕ ಅರ್ಧಶತಕದ ಆಟದ ನೆರವಿನಿಂದ ಕೋಲ್ಕತ್ತಾ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ. ವಾಖೆಂಡ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಕೋಲ್ಕತ್ತಾ ನೈಟ್‌ರೈಡರ್ಸ್ 4 ವಿಕೆಟ್ ನಷ್ಟಕ್ಕೆ 220 ರನ್‌ಗಳಿಸಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಮುಂಬೈ ಇನ್ನೂ 5 ಎಸೆತ ಬಾಕಿ ಇರುವಂತೆಯೇ 4 ವಿಕೆಟ್ ನಷ್ಟಕ್ಕೆ 224 ರನ್ ಹೊಡೆದು ಶುಭಾರಂಭ ಮಾಡಿತು. 6 ಓವರಿನ ಪವರ್ ಪ್ಲೇನಲ್ಲೇ 80 ರನ್ ಹೊಡೆದ ರೋಹಿತ್ ಶರ್ಮಾ ಮತ್ತು ರಿಕಲ್ಟನ್ 72 ಎಸೆತಗಳಲ್ಲಿ ಮೊದಲ ವಿಕೆಟಿಗೆ 148 ರನ್ ಜೊತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿದರು. 78 ರನ್(38 ಎಸೆತ, 6 ಬೌಂಡರಿ, 6 ಸಿಕ್ಸ್) ಗಳಿಸಿದ್ದ ರೋಹಿತ್ ಶರ್ಮಾ ಕ್ಯಾಚ್ ನೀಡಿ ಔಟಾದರು.
